The news is by your side.

ಖಾನಾಪುರ: ಮಳೆಯ ಅಬ್ಬರ, ನದಿ ತೀರದ ಜನರಿಗೆ ಎಚ್ಚರಿಕೆ

ಕಕ್ಕೇರಿ : ಖಾನಾಪುರ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕಾಡು ಪ್ರದೇಶದ ಹಾಗೂ ನದಿ ತೀರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನದಿ ಮತ್ತು ಹಳ್ಳಗಳ ಸುತ್ತಲೂ ಇರುವ ನೂರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ನೀರು ನುಗ್ಗಿ ನಾಟಿ ಮಾಡಿದ ಸಸಿಗಳು ನೀರಲ್ಲಿ ಮುಳುಗಿವೆ. ಪಶ್ಚಿಮ ಭಾಗದ ಕಣಕುಂಬಿ, ಜಾಂಬೋಟಿ, ಗುಂಜಿ ಮತ್ತು ಲೋಂಡಾ ಭಾಗದ ಸುಮಾರು ಹಳ್ಳಿಗಳು ಹಾಗೂ ಪೂರ್ವ ಭಾಗದ ಅವರೊಳ್ಳಿ, ಕೊಡಚವಾಡ, ಚಿಕ್ಕದಿನಕೊಪ್ಪ, ಮುಗಳಿಹಾಳ, ಪಾರಿಶ್ವಾಡ, ಹಟ್ಟಿಹೊಳಿ, ಬಿಳಕಿ, ಕಗ್ಗಣಗಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿ ಭಾಗದ ಸಾಕಷ್ಟು ರೈತರ ಜಮೀನುಗಳು ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗಿವೆ.

ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ಭಾರಿ ಮಳೆ ಆಗುವ ಸಂಭವ ಇದೆ. ಆದ್ದರಿಂದ ತಾಲೂಕಿನ ನದಿ ಹಳ್ಳ-ಕೊಳ್ಳದ ಎಲ್ಲ ಜನತೆ ಸುರಕ್ಷಿತ ಸ್ಥಳದಲ್ಲಿ ವಾಸಿಸಬೇಕೆಂದು ಖಾನಾಪುರ ತಾಲೂಕಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಖಾನಾಪುರ ತಾಲೂಕಿನ ಜೀವನದಿ ಮಲಪ್ರಭೆ ಜನ್ಮತಾಳಿದ ಕಣಕುಂಬಿ ಪ್ರದೇಶದಲ್ಲಿ ನಿನ್ನೆಯ ದಿನ ೨೨೬ಮಿ.ಮೀ ಮಳೆ ಆಗಿದ್ದರಿಂದ, ಬೆಳಗಾಗುವಷ್ಟರಲ್ಲಿ ಜಾಂಬೋಟಿ ಹತ್ತಿರದ ಹಬ್ಬನಹಟ್ಟಿ ಗ್ರಾಮದ ಬಳಿ ಮಲಪ್ರಭಾ ನದಿಯ ಮಧ್ಯಭಾಗದಲ್ಲಿ ಇರುವ ಹನುಮಾನ ಮಂದಿರ ಮುಳುಗಡೆಯಾಗಿದೆ. ಆದ್ದರಿಂದ ಖಾನಾಪೂರ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

- Advertisement -

Leave A Reply

Your email address will not be published.