The news is by your side.

ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೆಟ್ಟಿ

 

ಬೆಳಗಾವಿ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಇಂದು ಪರಿಶೀಲಿಸಿದರು.
ಸವದತ್ತಿ ತಾಲ್ಲೂಕಿನ ನವೀಲುತೀರ್ಥ ಜಲಾಶಯಕ್ಕೆ ಮೊದಲು‌ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನೀರಿನ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು.
ಜಲಾಶಯದ ನೀರಿನ ಮಟ್ಟದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು. ನೀರು ಬಿಡುಗಡೆಗಿಂತ ಮುಂಚೆ ನದಿ ತೀರದ ಜನರಿಗೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ಮುಂಚಿತವಾಗಿ ನೀಡಬೇಕು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನವೀಲುತೀರ್ಥ ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣಾಜಿರಾವ್ ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಬೈಲಹೊಂಗಲ ಪಟ್ಟಣದ ಕೆಲ ಪ್ರದೇಶಗಳನ್ನು ಸುತ್ತಾಡಿದ ಜಿಲ್ಲಾಧಿಕಾರಿಗಳು, ನೆರೆಹಾವಳಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಪರಿಶೀಲನೆ ಕೈಗೊಂಡು, ನಯಾನಗರ ಸೇತುವೆ ವೀಕ್ಷಿಸಿದರು.
ಪರಿಹಾರ ಕೇಂದ್ರಗಳಿಗೆ ಭೇಟಿ:
ಮಲಪ್ರಭಾ ನದಿ ತೀರದ ರಾಮದುರ್ಗ ತಾಲ್ಲೂಕಿನ ಹಿರೇ ಹಂಪಿಹೊಳಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮದ ಒಟ್ಟು 51 ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಸುರೇಬಾನದ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿರುತ್ತದೆ.
ಸುರೇಬಾನದ ಎಪಿಎಂಸಿ ಆವರಣದ ಕೇಂದ್ರದಲ್ಲಿ 12 ಕುಟುಂಬಗಳು ಮತ್ತು ಹೈಸ್ಕೂಲಿನಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ 39 ಕುಟುಂಬಗಳಿಗೆ ಆಶ್ರಯ‌ ಕಲ್ಪಿಸಲಾಗಿರುತ್ತದೆ.
ಈ ಕುಟುಂಬಗಳಿಗೆ ಊಟೋಪಹಾರ ಸೇರಿದಂತೆ ಕೋವಿಡ್-೧೯ ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

- Advertisement -

Leave A Reply

Your email address will not be published.