ಚಿಕ್ಕೋಡಿ ::ಕೃಷ್ಣ ನದಿ ತೀರದಲ್ಲಿ..ಬೋಟ್ಗಳ ವ್ಯವಸ್ಥೆ ಇಲ್ಲ, ಏನಿಲ್ಲ, ಎಲ್ಲಾ ಸುಳ್ಳು, ದೇವರೇ ಗತಿ.. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ನದಿತೀರದ ಮಳಿಗೆ ಭಾಗದಲ್ಲಿ ನೀರು ಪ್ರವೇಶಿಸಿದೆ. ಪರಿಣಾಮ ಆ ವಸತಿ ಪ್ರದೇಶದ ಜನರು ನೀರಿನಲ್ಲಿಯೇ ಸಂಚರಿಸುತ್ತಾ ತಮ್ಮ ಗೃಹಪಯೋಗಿ ವಸ್ತುಗಳನ್ನು ತೆಗೆದುಕೊಂಡು ಜಾನುವಾರುಗಳೊಂದಿಗೆ ಸುರಕ್ಷಿತವಾದ ಸ್ಥಳಕ್ಕೆ ತೆರಳುತ್ತಿದ್ದಾರೆ. ಯಾವುದೇ ಸರ್ಕಾರಿ ವ್ಯವಸ್ಥೆ ಇಲ್ಲದೆ ಪ್ರಾಣಾಪಾಯವನ್ನು ಲೆಕ್ಕಿಸದೇ ನೀರಿನಲ್ಲಿ ಜನರು ಸಂಚರಿಸುತ್ತಿದ್ದಾರೆ.
ಆದರೆ ಪ್ರವಾಹ ಮುಂಜಾಗೃತಾ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ತಾಲೂಕಾಡಳಿತ ಮಾತ್ರ ದಿವ್ಯನಿರ್ಲಕ್ಷವನ್ನು ವಹಿಸುತ್ತಿದೆ. ಎಲ್ಲೋ ಒಂದೆರೆಡು ಕಡೆ ‘ಅದು – ಇದು’ ಮಾಡಿದಂತೆ ಮಾಡಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಬೆನ್ನು ತಟ್ಟಿ ಕೊಳ್ಳುವ ಸರಕಾರಿ ಚಾಳಿ ಮುಂದುವರೆದಿದೆ.
ನದಿತೀರದಲ್ಲಿ ಬೋಟ್ಗಳ ವ್ಯವಸ್ಥೆ ಇಲ್ಲ, ಪೊಲೀಸ್ ಸಿಬ್ಬಂದಿಯೂ ಇಲ್ಲ, ಅಲ್ಲದೇ ಬ್ಯಾರಿಕೇಡ್ ವ್ಯವಸ್ಥೆಯನ್ನು ಮಾಡದೇ ಚಿಕ್ಕೋಡಿ ತಾಲೂಕಾಡಳಿತ ಪ್ರವಾಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣವಾಗಿ ವಿಫಲವಾಗಿದೆ. ಅದಲ್ಲದೆ ಸದ್ಯ ಕೃಷ್ಣಾನದಿಗೆ ೧ ಲಕ್ಷ ೯೦ ಸಾವಿರ ಕ್ಯೂಸೆಕ್ಸನಷ್ಟು ನೀರು ಹರಿದು ಬರುತ್ತಿದೆ. ಇದರಿಂದ ನದಿ ನೀರಿನ ಮಟ್ಟ ಮತ್ತಷ್ಟು ಎರಿಕೆಯಾಗಲಿದೆ. ಇದರಿಂದ ನದಿತೀರದ ಜನತೆಯಲ್ಲಿ ಆತಂಕವನ್ನು ಉಂಟು ಮಾಡಿದೆ.
ಮಹಾರಾಷ್ಟ್ರದ ಕೋಯ್ನಾ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ತಾಲೂಕಿನ ಕೃಷ್ಣಾನದಿಗೆ ೬ ಅಡಿಯಷ್ಟು ನೀರು ಎರಿಕೆಯಾಗಿದೆ.
