The news is by your side.

ಪ್ರವಾಹ ನಿರ್ಲಕ್ಷ್ಯ ತೋರಿದರೆ ಕ್ರಮ : ಡಿ ಸಿ ಎಚ್ಚರಿಕೆ

 

ಚಿಕ್ಕೋಡಿ: ಅಧಿಕಾರಿಗಳು ಪ್ರವಾಹ ನಿಯಂತ್ರಿಸುವಲ್ಲಿ ನಿರ್ಲಕ್ಷ ಮಾಡಿದರೆ ನಿರ್ಧಾಕ್ಷಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ಹೀಗಾಗಿ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಮೊದಲು ಮುಂಜಾಗೃತವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಪ್ರವಾಹ ನಿಯಂತ್ರಿಸಲು ಎಲ್ಲ ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರವಾಹ ಕುರಿತು ಮುಂಜಾಗ್ರತಾ ಕ್ರಮ ವಹಿಸುವುದು ಅವಶ್ಯಕವಾಗಿದೆ ಎಂದರು.

ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳ ಉಗಮ ಸ್ಥಾನದ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ನೆರೆಯ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರನ್ನು ನದಿಗಳಿಗೆ ಬಿಡುತ್ತಿದ್ದಾರೆ. ಚಿಕ್ಕೋಡಿ ಉಪವಿಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗೃತರಾಗಿ ಜನರನ್ನು ಸ್ಥಳಾಂತರ ಮಾಡಲು ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ತನಕ ಕಾಯದೇ ಮುಂಚಿತವಾಗಿ ಜನರಿಗೆ ತಿಳುವಳಿಕೆ ನೀಡಬೇಕು. ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ಜನರನ್ನು ಸ್ಥಳಾಂತರಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಇರುವ ರೈತರ ಟ್ರ್ಯಾಕ್ಟರ ಮತ್ತು ಲಾರಿಗಳನ್ನು ಬಳಕೆ ಮಾಡಿಕೊಂಡು ಜನರಿಗೆ ಸಾರಿಗೆ ವ್ಯವಸ್ಥೆ ಮಾಡಿಸಿಕೊಂಡು ಅವರನ್ನು ಜಾಗೃತರಾಗಿ ಸ್ಥಳಾಂತರಿಸಬೇಕು ಎಂದರು.

ಸ್ಥಳಾಂತರ ಮಾಡಿದ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಪರಿಹಾರ ಕೇಂದ್ರದಲ್ಲಿ ಸಮರ್ಪಕ ಕುಡಿಯುವ ನೀರು, ಶೌಚಾಲಯ ಮತ್ತು ಕೊರೊನಾ ಮುಂಜಾಗೃತವಾಗಿ ಸ್ಯಾನಿಟೈಜರ ಹಾಗೂ ಸಾಮಾಜಿಕ ಅಂತರದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳೀಯ ಶಿಕ್ಷಕರನ್ನು ಬಳಕೆ ಮಾಡಿಕೊಂಡು ಮುತುವರ್ಜಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪರಿಹಾರ ಕೇಂದ್ರದ ಹತ್ತಿರ ಜಾನುವಾರಗಳಿಗೆ ಶೆಡ್ ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಭಾರಿ ಪ್ರಮಾಣದಲ್ಲಿ ನೀರು ಬಂದರೇ ಮಿಲಟರಿ, ಅಗ್ನಿಶಾಮಕ ಹಾಗೂ ಎನ್‍ಡಿಆರ್‍ಎಫ್ ತಂಡದ ಬಳಕೆ ಮಾಡಿಕೊಳ್ಳಬೇಕು. ಅನಿವಾರ್ಯ ಇದ್ದರೇ ಮಾತ್ರ ಹೆಲಿಕಾಪ್ಟರ ಬಳಕೆ ಮಾಡಿಕೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ಡಿವೈಎಸ್‍ಪಿ ಮನೋಜ ನಾಯಿಕ, ನೀರಾವರಿ ನಿಗಮದ ಅಭಿಯಂತರ ಸಿ.ಡಿ.ಪಾಟೀಲ, ತಹಶೀಲ್ದಾರ ಸುಭಾಷ ಸಂಪಗಾವಿ, ತಾಪಂ ಇಒ ಸಮೀರ ಮುಲ್ಲಾ ಸೇರಿದಂತೆ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಐದು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.