The news is by your side.

ಗೋಕಾಕದ ಟೈಗರ್ ಗ್ಯಾಂಗ್ ಮೇಲೆ ಕೋಕಾ ಕಾಯ್ದೆಯನ್ವಯ ತನಿಖೆ

ಬೆಳಗಾವಿ: ಗೋಕಾಕನಲ್ಲಿ
ಮೇ 6ರಂದು ನಡೆದಿದ್ದ ಆದಿಜಾಂಬವ ನಗರ ಬಡಾವಣೆಯ ನಿವಾಸಿ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿಗಳು ಮತ್ತು ಅವರ ಸಹಚರರ ಮನೆಗಳ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಪೊಲೀಸರು, ರೂ 30.48 ಲಕ್ಷ ನಗದು, ಮಾರಕಾಸ್ತ್ರ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಇಲ್ಲಿ
ಪ್ರಕರಣ ಕುರಿತಂತೆ ಮಾಹಿತಿ ನೀಡಿದರು.
‘ಇಲ್ಲಿನ ಮರಾಠಾ ಗಲ್ಲಿ ನಿವಾಸಿ ಗಂಗಾಧರ ಸಂತ್ರಾಮ ಶಿಂಧೆ, ಕೇದಾರಿ ಬಸವಣ್ಣಿ ಜಾಧವ ಮತ್ತು ಸಂತೋಷ ಪಾಂಡುರಂಗ ಚಿಗಡೊಳ್ಳಿ, ಮೊಕಾಶಿ ಗಲ್ಲಿಯ ವಿನಾಯಕ ಬಸವರಾಜ ಹಡಗಿನಾಳ ಮತ್ತು ವಿಠ್ಠಲ ಪರಶುರಾಮ ಪವಾರ, ಸೋಮವಾರ ಪೇಟೆಯ ವಿನೋದ ಚಂದ್ರು ಹೊಸಮನಿ, ಅಂಬಗೇರ ಗಲ್ಲಿಯ ಕಿರಣ ವಿಜಯ ದೊಡ್ಡನ್ನವರ, ಸಿದ್ದೇಶ್ವರ ನಗರದ ರವಿ ಭೀಮಶಿ ಚೂನನ್ನವರ ಹಾಗೂ ಬಸವನಗರ ಬಡಾವಣೆಯ ಸುನೀಲ ಮಲ್ಲಿಕಾರ್ಜುನ ಮುರಕಿಭಾವಿ ಎನ್ನುವವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಆರೋಪಿಗಳು 2006ರಿಂದ ‘ಟೈಗರ್ ಗ್ಯಾಂಗ್‌’ ಎನ್ನುವ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಹಣ ಗಳಿಸುವ ಹಾಗೂ ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿ ಕೊಳ್ಳಲು ಸಂಘಟಿತರಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಗೊತ್ತಾಗಿದೆ.
ಕೊಲೆ, ಕೊಲೆಗೆ ಯತ್ನ, ಡಕಾಯಿತಿ ಹಾಗೂ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದರು. ಇದಕ್ಕಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಯುವಕರ ಮೇಲೆ ಪ್ರಭಾವ ಬೀರಿ ತಮ್ಮ ಸಂಘಟನೆಯ ಸದಸ್ಯರನ್ನಾಗಿ ಮಾಡಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ವಿವರಿಸಿದರು.

ಸಾಕ್ಷಿದಾರರನ್ನು ಹೆದರಿಸಿ, ಹಣದ ಆಮಿಷವೊಡ್ಡಿ ಪುರಾವೆಗಳನ್ನು ನಾಶಪಡಿಸುವುದರಲ್ಲಿ ನಿಸ್ಸೀಮರು. ಹೀಗಾಗಿ, ಈ ಆರೋಪಿಗಳ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ–2000 (ಕೆಸಿಒಸಿಎ) ಕಲಂ 3 ಮತ್ತು 4ನ್ನು ಅಳವಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

Shree Panjurlli Fine Dine ADD

- Advertisement -

Leave A Reply

Your email address will not be published.