The news is by your side.

ಟಿಆರ್ ಪಿ ಹೆಚ್ಚಿಸಿಕೊಳ್ಳಲು ತಮ್ಮ ಹೆಸರು ಬಳಕೆ – ಶರ್ಮಿಳಾ ಮಾಂಡ್ರೆ

 

ಬೆಂಗಳೂರು;ಕೆಲ ಮಾಧ್ಯಮಗಳಲ್ಲಿ ತಮ್ಮ ಹೆಸರು ಬರುತ್ತಿದೆ ಎಂದು ಗರಂ ಆಗಿರುವ ನಟಿ ಶರ್ಮಿಳಾ ಮಾಂಡ್ರೆ ಇಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

“ಕೆಲವು ಸುದ್ದಿ ವಾಹಿನಿಗಳಲ್ಲಿ ನನ್ನ ವಿರುದ್ಧ ಬಂದಿರುವ ಸುಳ್ಳು ಮತ್ತು ತಮಾಷೆಯ ಆರೋಪಗಳಿಂದ ನನಗೆ ಬಹಳ ನೋವಾಗಿದೆ. ಡ್ರಗ್ ದಂಧೆ ಆರೋಪದಲ್ಲಿ ನನ್ನ ಹೆಸರನ್ನು ಸುಖಾಸುಮ್ಮನೆ ಎಳೆದು ತರಲಾಗುತ್ತಿದೆ. ಹೀಗೆ ಸುಳ್ಳು ಸುದ್ದಿ ಮಾಡುವುದರ ಹಿಂದೆ ಈ ಸುದ್ದಿ ವಾಹಿನಿಗಳು ಮತ್ತು ಕೆಲವರು ತಮ್ಮ ಸ್ವಹಿತಾಸಕ್ತಿಯನ್ನು, ಉದ್ದೇಶವನ್ನು ಹೊಂದಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.

ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು, ವಾಣಿಜ್ಯ ವ್ಯವಹಾರದ ಲಾಭಕ್ಕಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ರೀತಿ ಸುಳ್ಳು, ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ನಾನು ಕೂಡ ಒಬ್ಬ ವ್ಯಕ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಿ, ಹಲವು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿ ಹೆಸರು, ಗೌರವ ಸಂಪಾದಿಸಿದ್ದೇನೆ.

ಮಾಧ್ಯಮಗಳಲ್ಲಿ, ನಾನು ಸಂಪರ್ಕ ಹೊಂದಿರುವ ವ್ಯಕ್ತಿಗಳೆಂದು ಹೇಳುವವರ ಜೊತೆ ನನಗೆ ಯಾವುದೇ ಸಂಬಂಧವಿಲ್ಲ, ಅವರನ್ನು ಭೇಟಿ ಮಾಡಿಲ್ಲ, ನೋಡಿಯೂ ಇಲ್ಲ. ನನ್ನ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳೆಲ್ಲ ಸುಳ್ಳು, ಅದಕ್ಕೆ ತಲೆಬುಡವಿಲ್ಲ ಎಂದೇ ನಾನು ಇಷ್ಟು ದಿನ ಪ್ರತಿಕ್ರಿಯಿಸಿರಲಿಲ್ಲ, ಹಾಗೆಂದು ಇನ್ನೂ ಸುಮ್ಮನೆ ಕೂರಲು ಸಾಧ್ಯವಿಲ್ಲ.

ನಾನು ಮೌನವಾಗಿದ್ದುಬಿಟ್ಟರೆ ಅದನ್ನೇ ಜನ ದೊಡ್ಡದು ಮಾಡಿ ಅದಕ್ಕೆ ಇನ್ನಷ್ಟು ಸುಳ್ಳುಗಳನ್ನು ಸೇರಿಸಿ ದೊಡ್ಡದು ಮಾಡುತ್ತಾರೆ. ಅವರಿಗೆ ನನ್ನ ಬಗ್ಗೆ ಕಥೆಕಟ್ಟಲು ನಾನು ಪ್ರೋತ್ಸಾಹ ನೀಡಿದಂತಾಗುತ್ತದೆ. ನನ್ನ ಬಗ್ಗೆ ಇಲ್ಲಸಲ್ಲದ ಆಪಾದನೆ ಮಾಡುವವರು, ವಾಹಿನಿಗಳಲ್ಲಿ ಸುಳ್ಳು ವರದಿ ಪ್ರಸಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇನ್ನು ನಾನು ಖಂಡಿತಾ ಹಿಂಜರಿಯುವುದಿಲ್ಲ ಎಂದು ನಟಿ ಶರ್ಮಿಳಾ ಮಾಂಡ್ರೆ ಎಚ್ಚರಿಕೆ ನೀಡಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.