The news is by your side.

ಮಾದಕ‌ ವಸ್ತು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿದ್ದರಾಮಯ್ಯ ಆಗ್ರಹ

 

ಬೆಂಗಳೂರು: ಮಾದಕ‌ ವಸ್ತು ಸೇವನೆ ಹಾಗೂ ಮಾರಾಟದ ಆರೋಪಿಗಳ ವಿರುದ್ಧ ಮುಖ್ಯಮಂತ್ರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಬಂಧಿತರಲ್ಲಿ ಕೆಲವರಿಗೆ ಬಿಜೆಪಿ ಪಕ್ಷದ ಜೊತೆ ಸಂಬಂಧ ಇದೆಯೆಂದು ಹೇಳಲಾಗುತ್ತಿದ್ದು, ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿರುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಹೇಳಿಕೆ ಹೀಗಿದೆ—-
“ಕಳೆದ 10 ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕವಸ್ತು ಸೇವನೆ/ಮಾರಾಟದ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ? ಅವರ ಹೆಸರುಗಳೇನು? ಶಿಕ್ಷೆಯ ಪ್ರಮಾಣ ಎಷ್ಟು? ಮಾದಕ ವಸ್ತುಗಳು ಎಲ್ಲಿಂದ ಸರಬರಾಜು ಆಗುತ್ತಿವೆ? ಮಾದಕ ವಸ್ತುಗಳ ದಂಧೆಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಶಾಮೀಲಾಗಿರುವ ಆರೋಪಗಳಿವೆ. ಅವರ ಮೇಲೆ ಯಾವ ಕ್ರಮಕೈಗೊಳ್ಳಲಾಗಿದೆ? ಅವರಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಎಷ್ಟು ಜನರು ಶಿಕ್ಷೆಗೊಳಗಾಗಿದ್ದಾರೆ?

ಎನ್ ಡಿಪಿಎಸ್ ಕಾಯ್ದೆಯ ಪ್ರಕಾರ ಮಾದಕವಸ್ತುಗಳ ಸೇವನೆ/ಮಾರಾಟ ನಿಯಂತ್ರಣಕ್ಕಾಗಿ ಜಿಲ್ಲೆ, ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕಾಗುತ್ತದೆ. ಇಂತಹ ಎಷ್ಟು ಸಮಿತಿಗಳನ್ನು ರಚಿಸಲಾಗಿದೆ? ಈ ಸಮಿತಿಗಳ ಸಭೆಗಳು ಎಷ್ಟು ನಡೆದಿವೆ ಮತ್ತು ಏನು ಕ್ರಮಕೈಗೊಳ್ಳಲಾಗಿದೆ? ರಾಜ್ಯದಲ್ಲಿ ಮಾದಕ ವಸ್ತುಗಳ ದುಷ್ಚಟಕ್ಕೆ ಸಿಕ್ಕಿರುವ ಮಕ್ಕಳ ತಂದೆ-ತಾಯಿಗಳಿಂದ ರಹಸ್ಯವಾಗಿ ಮಾಹಿತಿ ಪಡೆಯುವ ವ್ಯವಸ್ಥೆ ಇದೆಯೇ? ಇಂತಹ ಎಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ? ಕೈಗೊಂಡ ಕ್ರಮಗಳೇನು?

ರಾಜ್ಯದಲ್ಲಿ ಮಾದಕ ವಸ್ತು ವ್ಯಸನಕ್ಕೆ ಬಲಿಯಾದವರಲ್ಲಿ ಎಷ್ಟು ಜನರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ? ಎಷ್ಟು ಜನ ವ್ಯಸನದಿಂದ ಮುಕ್ತರಾಗಿದ್ದಾರೆ? ಎಷ್ಟು ಜನ ವ್ಯಸನಿಗಳಾಗಿದ್ದಾರೆ ಮತ್ತು ಎಷ್ಟು ಜನ ಸಾವಿಗೀಡಾಗಿದ್ದಾರೆ?

ಈ ಎಲ್ಲ ವಿವರ ಕೇಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ.”

Shree Panjurlli Fine Dine ADD

- Advertisement -

Leave A Reply

Your email address will not be published.