Education News

ʼಟೊಮ್ಯಾಟೋʼ ಕಾರಣಕ್ಕೆ ಬಲಿಯಾಯ್ತು ರೈತನ ಜೀವ

ʼಟೊಮ್ಯಾಟೋʼ ಕಾರಣಕ್ಕೆ ಬಲಿಯಾಯ್ತು ರೈತನ ಜೀವ

City Big News Desk.

ಟೊಮ್ಯಾಟೋದ ದರ ಯರ್ರಾಬಿರ್ರಿ ಏರಿಕೆಯಾಗಿದೆ. ಆದರೆ ಆಂಧ್ರಪ್ರದೇಶದಲ್ಲಿ ಟೊಮ್ಯಾಟೋದ ಕಾರಣಕ್ಕೆ ರೈತನ ಜೀವವೊಂದು ಬಲಿಯಾಗಿದೆ. ಟೊಮ್ಯಾಟೋ ಮಾರಾಟ ಮಾಡಿ ಮನೆಗೆ ಬರುತ್ತಿದ್ದ ರೈತನನ್ನು ಅಡ್ಡಗಟ್ಟಿ ಕೊಲೆಗೈದ ಘಟನೆಯು ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಮಂಡಲದ ಬೋಡುಮಲದಿನ್ನೆ ಗ್ರಾಮದಲ್ಲಿ ಸಂಭವಿಸಿದೆ.

ನರೇಮ್ ರಾಜಶೇಖರ್ ರೆಡ್ಡಿ ಎಂದು ಗುರುತಿಸಲಾದ 62 ವರ್ಷದ ರೈತ ಬುಧವಾರ ತನ್ನ ಗ್ರಾಮದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮಾರುಕಟ್ಟೆ ಯಾರ್ಡ್‌ನಲ್ಲಿ ಟೊಮೇಟೊ ಮಾರಾಟ ಮಾಡಿ ಅಪಾರ ಹಣ ಸಂಪಾದಿಸಿದ್ದ ರಾಜಶೇಖರ್‌ ಮೇಲೆ ದರೋಡೆ ಯತ್ನ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ರೈತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿ 30 ಲಕ್ಷ ಗಳಿಸಿದ್ದರು ಎಂದು ವರದಿಯಾಗಿದೆ.

ಮಂಗಳವಾರ ರಾತ್ರಿ ಬೋಡುಮಲ್ಲದಿನ್ನೆಯಿಂದ ದೂರದ ಕೃಷಿ ಕ್ಷೇತ್ರದಲ್ಲಿ ವಾಸವಿದ್ದ ರಾಜಶೇಖರ್ ಹಾಲು ನೀಡಲು ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಅಪರಿಚಿತ ದುಷ್ಕರ್ಮಿಗಳು ರೈತನನ್ನು ಅಡ್ಡಗಟ್ಟಿ, ರೇಷ್ಮೆ ಹಗ್ಗದಿಂದ ಕೈಕಾಲು ಕಟ್ಟಿ, ಕೊನೆಗೆ ಟವೆಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ವಿವಾಹಿತ ಪುತ್ರಿಯರನ್ನು ಅಗಲಿದ್ದು,ಅವರೆಲ್ಲ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಮಂಗಳವಾರದಂದು ಸಂಜೆ ಕೆಲ ಅಪರಿಚಿತ ದುಷ್ಕರ್ಮಿಗಳು ಟೊಮೆಟೋ ಖರೀದಿ ಮಾಡುವ ನೆಪದಲ್ಲಿ ರೈತನ ಜಮೀನಿಗೆ ಭೇಟಿ ನೀಡಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಜಶೇಖರ್ ಇತ್ತೀಚೆಗೆ ಮದನಪಲ್ಲಿಯ ಕೃಷಿ ಮಾರುಕಟ್ಟೆಯಲ್ಲಿ ಟೊಮೆಟೊ ಮಾರಾಟ ಮಾಡಿ ಸುಮಾರು 30 ಲಕ್ಷ ಆದಾಯ ಗಳಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಹಣಕಾಸಿನ ಲಾಭವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್ ಆರ್ ಗಂಗಾಧರ ರಾವ್ ಭೇಟಿ ನೀಡಿ ಮೃತರ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ. ಪ್ರಕರಣ ಭೇದಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಡಿಎಸ್ಪಿ ಕೆ. ಕೇಶಪ್ಪ ತಿಳಿಸಿದ್ದಾರೆ.

City Big News.

Disclaimer: This Story is auto-aggregated by a Syndicated Feed and has not been Created or Edited By City Big News Staff.