Please assign a menu to the primary menu location under menu

Entertainment

ಚಿರಂಜೀವಿ ಸರ್ಜಾರಿಂದ ಅಪ್ಪುವರೆಗೆ..! ಕನ್ನಡ ಚಿತ್ರರಂಗ ಇತ್ತೀಚೆಗೆ ಕಳೆದುಕೊಂಡ ನಟರಿವರು

ಚಿರಂಜೀವಿ ಸರ್ಜಾರಿಂದ ಅಪ್ಪುವರೆಗೆ..! ಕನ್ನಡ ಚಿತ್ರರಂಗ ಇತ್ತೀಚೆಗೆ ಕಳೆದುಕೊಂಡ ನಟರಿವರು

ಅಭಿಮಾನಿಗಳ ಪಾಲಿನ ಅಪ್ಪು, ಚಂದನವನದ ರಾಜಕುಮಾರ ನಟ ಪುನೀತ್​ ಕಾಣದಂತೆ ಮಾಯವಾಗಿದ್ದಾರೆ. ಇನ್ನು ಬಾಳಿ ಬದುಕಿ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಸಿನಿಮಾಗಳನ್ನು ನೀಡಬೇಕಿದ್ದ ಈ ಜೀವ ಯಶಸ್ಸಿನ ಉತ್ತಂಗದರಲ್ಲಿ ಇರುವಾಗಲೇ ಇಹಲೋಕ ತ್ಯಜಿಸಿರೋದು ಮರೆಯಲಾಗದಂತಹ ಆಘಾತವಾಗಿದೆ. ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್​​, ಬುಲೆಟ್​ ಪ್ರಕಾಶ್​ ಹೀಗೆ ಅಭಿಮಾನಿಗಳನ್ನು ತೊರೆದು ಹೋದ ತಾರೆಯರ ಪಟ್ಟಿ ಇದೀಗ ಪುನೀತ್​ ರಾಜ್​ಕುಮಾರ್​ವರೆಗೂ ಬಂದು ನಿಂತಿದೆ. 2020ರಿಂದ ಇಲ್ಲಿಯವರೆಗೆ ಸ್ಯಾಂಡಲ್​ವುಡ್​ನಲ್ಲಿ ಮಿಂಚಿ ಮರೆಯಾದ ತಾರೆಗಳ ಪಟ್ಟಿ ಇಲ್ಲಿದೆ ನೋಡಿ :

1.ಕಿಶೋರಿ ಬಲ್ಲಾಳ್ :


ಬಾಲಿವುಡ್​ನಲ್ಲೂ ಮಿಂಚಿ ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಫೆಬ್ರವರಿ 2020ರಂದು ವಿಧಿವಶರಾಗಿದ್ದರು. 1960ರಿಂದ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಕಿಶೋರಿ ಬಲ್ಲಾಳ್​ ತಮ್ಮ 15 ವರ್ಷಗಳ ಸಿನಿಮಾ ಜರ್ನಿಯಲ್ಲಿ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕರ್ನಾಟಕದವರೇ ಆದ ಕಿಶೋರಿ ಬಲ್ಲಾಳ್​ ಭರತನಾಟ್ಯ ಪ್ರವೀಣ ಎನ್​ ಶ್ರೀಪತಿ ಬಲ್ಲಾಳ್​ರನ್ನು ವರಿಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಕೊನೆಯದಾಗಿ ಇವರು ಕನ್ನಡದ ಕಹಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

2. ಬುಲೆಟ್​ ಪ್ರಕಾಶ್​

ಅದೊಂದು ಕಾಲವಿತ್ತು. ಸ್ಯಾಂಡಲ್​ವುಡ್​ನ ಕನ್ನಡ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಧಾರಿಗಳ ಪೈಕಿ ಬುಲೆಟ್​ ಪ್ರಕಾಶ್​ ಖಾಯಂ ಸ್ಥಾನ ಪಡೆದಿದ್ದರು. ಯಾವುದೇ ಸಾಮಾನ್ಯ ಸಿನಿಮಾಗಳನ್ನು ತಮ್ಮ ಕಾಮಿಡಿ ಟಚ್​ನ ಮೂಲಕ ಮತ್ತೊಂದು ಲೆವೆಲ್​​ ಕೊಂಡೊಯ್ಯಬಲ ಸಾಮರ್ಥ್ಯ ಬುಲೆಟ್​ ಅವರಿಗಿತ್ತು.

ಚಂದನವನದ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಪ್ರಕಾಶ್​​ 2020ರ ಮಾರ್ಚ್​ 31ರಂದು ಯಕೃತ್ತು ಹಾಗೂ ಕಿಡ್ನಿ ಸಮಸ್ಯೆಯಿಂದಾಗಿ ದೈವಾಧೀನರಾದರು. ಸದಾ ರಾಯಲ್​ ಎನ್​ಫೀಲ್ಡ್​ ಬೈಕ್​ನಲ್ಲೇ ಸುತ್ತುತ್ತಿದ್ದ ಪ್ರಕಾಶ್​ ಇದೇ ಕಾರಣಕ್ಕೆ ಬುಲೆಟ್​ ಪ್ರಕಾಶ್​ ಎಂದು ಚಿರಪರಿಚಿತರಾಗಿದ್ದರು.

3. ಮೈಕೆಲ್​ ಮಧು


ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 3 ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮೈಕೆಲ್​ ಮಧು ನಟನಾಗಿ, ವಿದೂಷಕನಾಗಿ ಸರಿ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಂತವರು.

ಓಂ, ಶ್​, ಎಕೆ 47 ಹಾಗೂ ಇತ್ತೀಚೆಗೆ ತೆರೆ ಕಂಡ ಫ್ರೆಂಚ್​ ಬಿರಿಯಾನಿ ಇವೆಲ್ಲ ಮೈಕೆಲ್​ ಮಧುರಿಗೆ ಹೆಸರು ತಂದುಕೊಟ್ಟಂತಹ ಸಿನಿಮಾಗಳು. ಹೃದಯಾಘಾತಕ್ಕೆ ಒಳಗಾಗಿದ್ದ ಮೈಕಲ್ ಮಧು 2020ರ ಮೇ 13ರಂದು ಕೊನೆಯುಸಿರೆಳೆದಿದ್ದರು.

4. ಚಿರಂಜೀವಿ ಸರ್ಜಾ


ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದೆರಗಿತ್ತು.

ಚಿತ್ರರಂಗದಲ್ಲಿ ಮಿಂಚುತ್ತಿದ್ದ ಸಂದರ್ಭದಲ್ಲೇ ಅವರು ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಜೂನ್​ 7ರಂದು ಹಠಾತ್​ ನಿಧನರಾಗಿದ್ದರು. ಚಿರಂಜೀವಿ ಸರ್ಜಾ ನಿಧನರಾದ ಬಳಿಕ ಅವರಿಗೆ ಗಂಡು ಮಗು ಜನಿಸಿತ್ತು. ಗಂಡು ಮಗುವಿಗೆ ಪತ್ನಿ ಹಾಗೂ ನಟಿ ಮೇಘನಾ ರಾಜ್​, ರಾಯನ್​ ರಾಜ್​ ಸರ್ಜಾ ಎಂದು ನಾಮಕರಣ ಮಾಡಿದ್ದರು.

5.  ಶಾಂತಮ್ಮ


ಕನ್ನಡ ಚಿತ್ರರಂಗದ ಹಿರಿಯ ನಟಿ ಚಂದನವನದಲ್ಲಿ ಸರಿ ಸುಮಾರು 6 ದಶಕಗಳ ಕಾಲ ಕೆಲಸ ಮಾಡಿದ್ದಾರೆ.

ಶಾಂತಮ್ಮ 400ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ನಟನಾ ಚಾಕಚಕ್ಯತೆಯನ್ನು ತೋರಿದ್ದಾರೆ. 1965ರಲ್ಲಿ ಹರಿ ಭಕ್ತ ಸಿನಿಮಾ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಶಾಂತಮ್ಮ ಬಳಿಕ ಹಿಂದಿ ಹಾಗೂ ತಮಿಳು ಚಿತ್ರರಂಗಳಲ್ಲಿಯೂ ಮಿಂಚಿದ್ದರು. ಒಳ್ಳೆಯ ನಟನಾ ಪ್ರತಿಭೆ ಇದ್ದರೂ ಸಹ ಒಂದು ಸಮಯದಲ್ಲಿ ಶಾಂತಮ್ಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಮಕ್ಕಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರದ ಬಳಿ ಧನಸಹಾಯಕ್ಕೆ ಮನವಿಯನ್ನೂ ಮಾಡಿದ್ದರು. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶಾಂತಮ್ಮ 95 ವರ್ಷ ವಯಸ್ಸಿನಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

6. ಸುಧಾಕರ್​


ರಾಕ್​ಲೈನ್​ ಸುಧಾಕರ್​​ ಕೂಡ ಕಳೆದೊಂದು ದಶಕಗಳಿಂದ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದರು. ಸಾಮಾನ್ಯವಾಗಿ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ತಿದ್ದ ಈ ನಟ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.

ಟಗರು, ಪಂಚರಂಗಿ ಹಾಗೂ ಪಾಪ್​ಕಾರ್ನ್ ಮಂಕಿ ಟೈಗರ್​ ಸಿನಿಮಾಗಳು ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿವೆ. ಶುಗರ್​ಲೆಸ್​ ಸಿನಿಮಾ ಶೂಟಿಂಗ್​ ವೇಳೆ ಕುಸಿದುಬಿದ್ದ ಸುಧಾಕರ್​​ರನ್ನು ಕೂಡಲೇ ಆಸ್ಪತ್ರೆಗೆ ಕರೆದಕೊಂಡು ಹೋಗಲಾಗಿತ್ತು. ಆದರೂ ಅವರು 2020ರ ಸೆಪ್ಟೆಂಬರ್​ 24ರಂದು ಸಾವಿಗೀಡಾದರು.

7. ಸಿದ್ದರಾಜ್​ ಕಲ್ಯಾಣಕರ್​


ಕಿರುತೆರೆಯಲ್ಲಿ ನಟನಾ ವೃತ್ತಿ ಆರಂಭಿಸಿದ ಸಿದ್ದರಾಜ್​​ 70ರ ದಶಕಗಳ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಯಾರೇ ನೀ ಅಭಿಮಾನಿ ಸಿನಿಮಾ ಮೂಲಕ ಸಿದ್ದರಾಜ್​ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು. ಕಾರ್ಡಿಯಾಕ್​ ಅರೆಸ್ಟ್​ನಿಂದ 2020ರ ಸೆಪ್ಟೆಂಬರ್​ನಲ್ಲಿ ನಿಧನರಾದರು.

8. ಕೊಡಗನೂರು ಜಯಕುಮಾರ್​


ರಂಗಭೂಮಿ , ಕಿರುತೆರೆ ಬೆಳ್ಳಿತೆರೆಯ ಕಲಾವಿದರಾಗಿದ್ದ ಕೊಡಗನೂರು ಜಯಕುಮಾರ್​​ ಪಾಪಾ ಪಾಂಡು ಧಾರವಾಹಿ ಮೂಲಕ ಮನೆ ಮಾತಾಗಿದ್ದರು.ಇವರು 2020ರ ಅಕ್ಟೋಬರ್​ 6ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

9. ಬಿ . ಜಯಾ


ನಾಟಕಗಳಲ್ಲಿ ಅಭಿನಯಿಸುವ ಮೂಲಕ ನಟನಾ ಪ್ರವೃತ್ತಿ ಆರಂಭಿಸಿದ ಹಿರಿಯ ನಟಿ ಬಿ. ಜಯಾ ಕನ್ನಡದಲ್ಲಿ 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾ. ರಾಜ್​ಕುಮಾರ್​, ಉದಯ್​ ಕುಮಾರ್, ದ್ವಾರಕೀಶ್​ ಹಾಗೂ ಬಾಲಕೃಷ್ಣರಂತಹ ಮೇಧಾವಿ ನಟರ ಜೊತೆ ಸ್ಕ್ರೀನ್​ ಶೇರ್​ ಮಾಡಿದ್ದ ಈ ನಟಿ ಜೂನ್​ 3ರಂದು ತಮ್ಮ 77ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು.

10. ಸುರೇಶ್​ ಚಂದ್ರ


ಚೆಲುವಿನ ಚಿತ್ತಾರ, ಉಗ್ರಂ ಸಿನಿಮಾ ಖ್ಯಾತಿಯ ನಟ ಸುರೇಶ್​ ಚಂದ್ರ ಕೂಡ ಇದೇ ವರ್ಷ ಅಭಿಮಾನಿಗಳನ್ನು ಅಗಲಿದ್ದಾರೆ. ಕೊರೊನಾ ವೈರಸ್​ನಿಂದ ಸೋಂಕಿಗೀಡಾಗಿದ್ದ ಅವರು ಜೂನ್​ 11ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

11. ಸಂಚಾರಿ ವಿಜಯ್​


ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್​ ಅತ್ಯದ್ಭುತ ನಟನೆಯ ಮೂಲಕ ಮನೆ ಮಾತಾಗಿದ್ದವರು. ಇವರ ನಾನು ಅವನಲ್ಲ ಅವಳು ಸಿನಿಮಾ ದೇಶ ಮಟ್ಟದಲ್ಲಿ ಸದ್ದು ಮಾಡಿತ್ತು. ಸಮಾಜ ಸೇವಕನೂ ಆಗಿದ್ದ ಸಂಚಾರಿ ವಿಜಯ್​ ರಸ್ತೆ ಅಪಘಾತದಿಂದಾಗಿ ಈ ವರ್ಷದ ಜೂನ್​ 18ರಂದು ಬಾರದ ಲೋಕಕ್ಕೆ ತೆರಳಿದರು.

12. ಜಯಂತಿ


ಅಭಿಮಾನಿಗಳ ಪಾಲಿಗೆ ಅಭಿನಯ ಶಾರದೆ ಎನಿಸಿಕೊಂಡಿದ್ದ ಬಹುಭಾಷಾ ನಟಿ ಜಯಂತಿ ಕೂಡ ಇದೇ ವರ್ಷ ಅಭಿಮಾನಿಗಳನ್ನು ಅಗಲಿದ್ದಾರೆ. ಡಾ. ರಾಜ್​ಕುಮಾರ್​ ಜೊತೆಯಲ್ಲಿಯೇ 45 ಸಿನಿಮಾಗಳಲ್ಲಿ ನಟಿಸಿದ್ದ ನಟಿ ಜಯಂತಿ ಕನ್ನಡದಲ್ಲಿ 190 ಸಿನಿಮಾಗಳು ಹಾಗೂ ದಕ್ಷಿಣ ಭಾರತದಲ್ಲಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದಂತವರು.

ಭಾರತ ಚಿತ್ರರಂಗದ ಮತ್ತೊಬ್ಬ ಅತ್ಯುನ್ನತ ನಟ ಎನ್​ಟಿಆರ್​ ಜೊತೆಯಲ್ಲೂ ಅಭಿನಯಿಸಿದ ಕೀರ್ತಿ ಅವರದ್ದು.76 ವರ್ಷ ಪ್ರಾಯದವರಾಗಿದ್ದ ನಟಿ ಜಯಂತಿ ತಮ್ಮ ನಿವಾಸದಲ್ಲಿಯೇ ಜುಲೈ 26ರಂದು ವಿಧಿವಶರಾಗಿದ್ದರು.

ಇನ್ನುಳಿದಂತೆ ಜಿ.ಕೆ. ಗೋವಿಂದ ರಾವ್​, ಸತ್ಯಜಿತ್​, ಶಂಖನಾದ ಅರವಿಂದ್​ ಸೇರಿದಂತೆ ಇನ್ನೂ ಅನೇಕರು ಇಹಲೋಕ ಯಾತ್ರೆ ಮುಗಿಸಿದ್ದಾರೆ.


Leave a Reply

error: Content is protected !!