Please assign a menu to the primary menu location under menu

State

ಡ್ರಗ್ಸ್ ವಿರುದ್ಧ ನಾನು ಯುದ್ಧ ಸಾರಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ

ಡ್ರಗ್ಸ್ ವಿರುದ್ಧ ನಾನು ಯುದ್ಧ ಸಾರಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಡ್ರಗ್ಸ್ ವಿರುದ್ಧ ನಾನು ಯುದ್ಧ ಸಾರಿದ್ದೇನೆ. ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ ಸೀಜ್ ಮಾಡಲಾಗಿದೆ. ಕಾನೂನಿನನ್ವಯ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕೇಸ್ ಹಾಕಲಾಗಿದೆ. ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಕರಣದಲ್ಲಿ ಶ್ರೀಕೃಷ್ಣ ಎಂಬಾತನ ಬಂಧನವಾಗಿದೆ. ಡ್ರಗ್ ಜತೆಗೆ ಹ್ಯಾಕಿಂಗ್ ಸಹ ಮಾಡುತ್ತಿದ್ದ. ನಂತರ 2020 ರಲ್ಲಿ ನಮ್ಮ ಸರ್ಕಾರ ಆತನನ್ನು ಬಂಧನ ಮಾಡಿದೆ. ನಂತರ ವಿಚಾರಣೆ ವೇಳೆ ಶ್ರೀಕಿ ಹ್ಯಾಕರ್ ಎಂದು ಗೊತ್ತಾಗುತ್ತದೆ. ಡಾರ್ಕ್ ವೆಬ್ ಸೇರಿ‌ ಬೇರೆ ಹಣಕಾಸು ಸಂಸ್ಥೆಗಳ ವೆಬ್ ಸೈಟ್ ಹ್ಯಾಕ್ ಮಾಡಿದ್ದು ಗೊತ್ತಾಗುತ್ತದೆ. ಮೂರು ಕೇಸ್ ಆತನ ಮೇಲಿದೆ. ಮನಿ ಲಾಂಡರಿಂಗ್, ಹ್ಯಾಕಿಂಗ್, ಡ್ರಗ್ ಕೇಸ್ ನಲ್ಲಿ ಆತ ಶಾಮೀಲಾಗಿದ್ದಾನೆ. 2018 ರ ಫೆಬ್ರವರಿಯಲ್ಲಿ ಶ್ರೀಕಿ ಮೇಲೆ ಕೇಸ್ ಬಂದಿತ್ತು. ಆತನ ಜತೆ ಇದ್ದ ಐದಾರು ಜನರ ಬಂಧನವಾಗುತ್ತದೆ. ಆದರೆ ಶ್ರೀಕಿ ಬಂಧನ ಮಾಡಿರಲ್ಲ. ಆಗ ಯಾವ ಸರ್ಕಾರ ಇತ್ತು‌ ಗಮನಿಸಿ. ನಂತರ ಆತನಿಗೆ ಬೇಲ್ ಸಿಗುತ್ತದೆ. ಬೇಲ್ ಸಿಕ್ಕ ಬಳಿಕವೂ ಕರೆಸಿ ವಿಚಾರಣೆ ಮಾಡಲ್ಲ. ಯುಬಿ ಸಿಟಿ ದಾಂಧಲೆ ಪ್ರಕರಣದಲ್ಲಿ ಆತನ‌ ಬಂಧನ ಆಗಿರುತ್ತದೆ. ಆಗಲೇ ಸರಿಯಾಗಿ ವಿಚಾರಣೆ ಮಾಡಿದ್ದಿದ್ದರೆ ಆತನ ಇತರೆ ದುಷ್ಕೃತ್ಯ, ಡ್ರಗ್ ವಿಚಾರ ಬಯಲಿಗೆ ಬರುತ್ತಿತ್ತು ಎಂದರು.

ನಮ್ಮ ಸರ್ಕಾರದ ಇಪೋರ್ಟಲ್ ಹ್ಯಾಕ್ ಮಾಡಿದ್ದು ಬೇರೆ ಕೇಸ್. 2019 ರ ಜುಲೈ ನಲ್ಲಿ ಶ್ರೀಕಿ ಇ‌ ಪೋರ್ಟಲ್ ಹ್ಯಾಕ್ ಮಾಡಿದ್ದ. ಕಾಂಗ್ರೆಸ್ ಆತನನ್ನು ಬಂಧಿಸದೇ ಬಿಟ್ಟಿತ್ತು. ಮಾರ್ಚ್ ನಲ್ಲಿ ನಾವು ಇಡಿಗೆ ಮನಿ ಲಾಂಡರಿಂಗ್ ಶಿಫಾರಸು ಮಾಡಿದ್ದೇವೆ, ಅದರ ತನಿಖೆ ನಡಿಯುತ್ತಿದೆ. ನಮ್ಮ ಈ ಪೋರ್ಟಲ್ ಸಹ ಆತ ಹ್ಯಾಕ್ ಮಾಡಿದ್ದ. ಇದನ್ನ ಸಿಐಡಿ ತನಿಖೆ ಮಾಡುತ್ತಿದೆ. ಸಿಬಿಐನ ಇಂಟರ್ ಪೋಲ್ ಬ್ರಾಂಚ್ ಗೂ ಕೇಸ್ ಶಿಫಾರಸು ಮಾಡಿದ್ದೇವೆ ಎಂದು ಸಿಎಂ ಹೇಳಿದರು.

ಪ್ರಾಮಾಣಿಕ ತನಿಖೆ: ನಾವು ಅತ್ಯಂತ ಪ್ರಾಮಾಣಿಕತೆಯಿಂದ ತನಿಖೆ ಮಾಡಿದ್ದೇವೆ. ಈ ಕೇಸ್ ನಲ್ಲಿ ನೊ ಕಾಂಪ್ರಮೈಸ್, ನಾವು ಸ್ಪಷ್ಟವಾಗಿದ್ದೇವೆ. ನಾವು ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಟ್ ಕಾಯಿನ್, ಮನಿ‌ಲಾಂಡರಿಂಗ್, ಡ್ರಗ್ ಕೇಸ್ ನಲ್ಲಿ ಯಾರೇ ಇದ್ದರೂ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ರಕ್ಷಣೆ ಮಾಡ್ತಿಲ್ಲ. ಯಾರೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳುತ್ತೇವ ಎಂದು ಸಿಎಂ ಭರವಸೆ ನೀಡಿದರು.

ಸಿದ್ದರಾಮಯ್ಯಗೆ ತಿರುಗೇಟು: ಸಿದ್ದರಾಮಯ್ಯ ಟ್ವೀಟ್ ಮಾಡಿ ಬಿಟ್ ಕಾಯಿನ್ ನಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆ, ಅವರ ರಕ್ಷಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸಾಕ್ಷಿ ಆಧಾರ ಇಟ್ಟು ಮಾತಾಡಬೇಕು. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಸಾಕ್ಷಿ ಆಧಾರ ಕೊಡಲಿ, ಅದನ್ನೂ ತನಿಖೆ ಮಾಡುತ್ತೇವೆ. ಏನೂ ಇಲ್ಲದೇ ಸೂತ್ರ ಇಲ್ಲದೇ ಪಟ ಬಿಡಲು ಹೋಗಬಾರದು ಎಂದು ಸಿಎಂ ತಿರುಗೇಟು ನೀಡಿದರು.

ಕಾಂಗ್ರೆಸ್ ನವರಿಗೆ ಸೋಲುವ ಭಯ ಇದೆ. ಈಗಿಂದಲೇ ಅನೇಕ‌ ಆರೋಪ ಮಾಡುತ್ತಿದ್ದಾರೆ. ಚುನಾವಣಾ ರಹಿತ ಆರೋಪವನ್ನು ಮಾಡುತ್ತಿದೆ. ಎರಡೂ ಚುನಾವಣೆ ಪ್ರಚಾರ ಮಾಡಿದ್ದೇವೆ. ಎರಡೂ ಕಡೆ ಅಭೂತಪೂರ್ವ ಬೆಂಬಲ ಇದೆ. ಎರಡೂ ‌ಕಡೆ ಗೆಲ್ಲುವ ವಿಶ್ವಾಸ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.


Leave a Reply

error: Content is protected !!