Sports News

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ವಿವಿಧ ಆಟೋಟಗಳಿಗೆ ಸಚಿವ ನಾಗೇಂದ್ರರಿಂದ ಚಾಲನೆ

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ವಿವಿಧ ಆಟೋಟಗಳಿಗೆ ಸಚಿವ ನಾಗೇಂದ್ರರಿಂದ ಚಾಲನೆ

ಬೆಂಗಳೂರು: ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಹುಟ್ಟುಹಬ್ಬದ ಸ್ಮರಣೆಯಲ್ಲಿ ಆಚರಿಸುವ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ವಿವಿಧ ಆಟೋಟಗಳ ಆಯೋಜನೆಯನ್ನು ಮಾಡಲಾಗಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ 2023ನೇ ಸಾಲಿನ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ರಾಜ್ಯಾದ್ಯಂತ ಆಯೋಜಿಲಾಗಿರುವ 30ಕ್ಕೂ ಹೆಚ್ಚು ಕ್ರೀಡಾ ಕಾರ್ಯಕ್ರಮಗಳಿಗೆ ಯುವ ಸಬಲಿಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ಚಾಲನೆ ನೀಡಿದರು.

2023ರ ರಾಷ್ಟ್ರಿಯ ಕ್ರೀಡಾ ದಿನ ಆಚರಣೆಯನ್ನು ಈ ಬಾರಿ ಬಹಳ ವಿನೂತನ ರೀತಿಯಲ್ಲಿ ಆಯೋಜಿಸಲಾಗಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಒಲಿಂಪಿಕ್ ಕ್ರೀಡೆಗಳು, ಸಾಹಸ ಕ್ರೀಡೆಗಳು, ದೇಶೀ, ಸಾಂಪ್ರದಾಯಿಕ ಕ್ರೀಡೆಗಳು ಹಾಗೂ ಮನರಂಜನೆ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಆರ್ಚರಿ, ಮಲ್ಲಕಂಬ, ಬಾಸ್ಕೆಟ್ ಬಾಲ್, ಸ್ಪೋಟ್ರ್ಸ್ ಕ್ಲೈಂಬಿಂಗ್, ರ್ಯಾಪೆಲ್ಲಿಂಗ್ ಫೆನ್ಸಿಂಗ್, ಬ್ಯಾಕಿಂಗ್, ಹಾಕಿ, ಆರ್ಚರಿ, ಜೂಡೋ, ಟೇಕ್ವಾಂಡೋ, ಮಣ್ಣಿನ ಕುಸ್ತಿ, ಹಗ್ಗಜಗ್ಗಾಟ, ಜುಮಾರಿಂಗ್, ಜಿಪ್ ಲೈನ್, ಸ್ಕೇಟಿಂಗ್, ಸ್ಕೇಟ್ ಬೋಡಿರ್ಂಗ್, ಚೆಸ್ ಫುಟ್ಬಾಲ್ ಇತ್ಯಾದಿ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಾಮಗ್ರಿ ಹಾಗೂ ಮ್ಯಾಟ್‍ಗಳ ಮೇಲೆ ಸ್ವತಃ ಆಟವಾಡಿ ಆನಂದಿಸುವ ಅವಕಾಶವನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರಿಗೆ ಉಚಿತ ಹಾಗೂ ಮುಕ್ತ ಪ್ರವೇಶವಿರುವ ಈ ವಿವಿಧ ಆಟೋಟಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡು ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ನಾಗೇಂದ್ರ ಅವರು ಮಾತನಾಡಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಸ್ಮರಣಾರ್ಥ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನವನ್ನು ಈ ಬಾರಿ ನಮ್ಮ ರಾಜ್ಯದಲ್ಲಿ ವಿನೂತನವಾಗಿ ಆಚರಿಸಬೇಕೆಂದು ನಿರ್ಣಯಿಸಿ ಈ ವಿವಿಧ ಆಟೋಟಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.  ರಾಜ್ಯದಲ್ಲಿ ಕ್ರೀಡಾಕ್ಷೇತ್ರ ಅತ್ಯಂತ ಕ್ರೀಯಾಶೀಲವಾಗಿದ್ದು, ಯುವಜನತೆ ಅತ್ಯುತ್ಸಾಹದಿಂದ ವಿವಿಧ ಕ್ರೀಡೆಗಳಲ್ಲಿ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಸರನ್ನು ಬೆಳಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡೆಯನ್ನು ಸಂಭ್ರಮಿಸಲು ಹಾಗೂ ರಾಜ್ಯ ಕ್ರೀಡಾ ಕ್ಷೇತ್ರದ ಸಾಧಕರು ಹಾಗು ಕ್ರೀಡೆಯ ಬೆಳವಣಿಗೆ ಸಹಕಾರಿಯದವರನ್ನು ಗುರುತಿಸಿ ಸನ್ಮಾನಿಸಲು ಇದು ಸುಸಂದರ್ಭ ಎಂದು ಹೇಳಿದರು.

ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉತ್ಸಾವಿರುವ ಎಲ್ಲರ ಬೆನ್ನಿಗೆ ಬೆಂಬಲವಾಗಿ ರಾಜ್ಯ ಸರ್ಕಾರ ನಿಲ್ಲಲಿದೆ. ಕೇವಲ ಕ್ರೀಡಾ ಇಲಾಖೆಯಲ್ಲದೆ ವಿವಿಧ ಸಂಘಸಂಸ್ಥೆಗಳೂ ಕೂಡಾ ಕ್ರೀಡಾ ರಂಗದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿವೆ. ಇಂತಹ ಸಂಘಸಂಸ್ಥೆಗಳಾಗಲಿ ಅಥವಾ ಕ್ರೀಡೆಗೆ ಸಂಬಂಧಿಸಿದಂತೆ ಯಾವುದೆ ವ್ಯಕ್ತಿಯಾಗಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಅವರ ಸಹಕಾರವನ್ನು ಸರ್ಕಾರ ಸ್ವಾಗತಿಸುತ್ತದೆ. ಕ್ರೀಡಾಪಟುಗಳು ಮತ್ತು ಕ್ರೀಡಾಕ್ಷೇತ್ರದ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರು, ಸರ್ಕಾರ ಪರಿಹರಿಸಲಿಕ್ಕೆ ಸಿದ್ದವಿದೆ ಎಂದು ಸಚಿವರು ಹೇಳಿದರು.

ಈ ಬಾರಿಯ ರಾಷ್ಟ್ರಿಯ ಕ್ರೀಡಾ ದಿನದ ಘೋಷವಾಕ್ಯ ‘ಎಲ್ಲರನ್ನೂ ಒಳಗೊಳ್ಳುವ ಹಾಗೂ ಸದೃಢ ಸಮಾಜಕ್ಕಾಗಿ ಕ್ರೀಡೆ’ ಎಂದಿದೆ. ಈ ಘೋಷವಾಕ್ಯದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಈ ಸಂದರ್ಭಲ್ಲಿ ಸಚಿವ ನಾಗೇಂದ್ರ ಹೇಳಿದರು.

ಈ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಪ್ರಧಾನ ಕಾರ್ಯಧರ್ಶಿ ಮಂಜುನಾಥ್ ಪ್ರಸಾದ್, ಎಂಎಲ್‍ಸಿ ಹಾಗು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯಧರ್ಶಿ ಕೆ ಗೋವಿಂದರಾಜು, ಯುವ ಸಬಲೀಕರಣ ಕ್ರೀಡಾ ಇಲಾಖೆ ಅಯುಕ್ತ ಶಶಿಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಕೋಚ್‍ಗಳು, ಹಿರಿಯ ಕ್ರೀಡಾಪಟುಗಳು ಹಾಜರಿದ್ದರು.

Disclaimer: This Story is auto-aggregated by a Syndicated Feed and has not been Created or Edited By City Big News Staff.