Please assign a menu to the primary menu location under menu

National

ಭಾರತವಿಂದು ಆಂತರಿಕ- ಬಾಹ್ಯ ಸವಾಲನ್ನು ಎದುರಿಸಲು ಸಮರ್ಥವಾಗಿದೆ: ಪ್ರಧಾನಿ ಮೋದಿ

ಭಾರತವಿಂದು ಆಂತರಿಕ- ಬಾಹ್ಯ ಸವಾಲನ್ನು ಎದುರಿಸಲು ಸಮರ್ಥವಾಗಿದೆ: ಪ್ರಧಾನಿ ಮೋದಿ

ಹೊಸದಿಲ್ಲಿ: ಇಂದು ಭಾರತವು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಿದ್ದು, ಯಾವುದೇ ಆಂತರಿಕ ಅಥವಾ ಬಾಹ್ಯ ಸವಾಲನ್ನು ಎದುರಿಸಲು ದೇಶವು ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆದರೆ, ಜನರು ಒಗ್ಗಟ್ಟಿನಿಂದ ಇದ್ದರೆ ಮಾತ್ರ ದೇಶ ತನ್ನ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 146 ನೇ ಜನ್ಮದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ಭೂಮಿ, ನೀರು, ವಾಯು, ಬಾಹ್ಯಾಕಾಶ ಹೀಗೆ ಪ್ರತಿಯೊಂದು ರಂಗದಲ್ಲೂ ಭಾರತ ಸಾಮರ್ಥ್ಯವಾಗಿದೆ ಎಂದು ಹೇಳಿದರು.

“ಸರ್ದಾರ್ ಪಟೇಲ್ ಯಾವಾಗಲೂ ಭಾರತವು ಸಮರ್ಥ, ಅಂತರ್ಗತ, ಸೂಕ್ಷ್ಮ, ಎಚ್ಚರಿಕೆ, ವಿನಮ್ರ ಮತ್ತು ಅಭಿವೃದ್ಧಿ ಹೊಂದಬೇಕೆಂದು ಬಯಸಿದ್ದರು. ಅವರು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದರು” ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ಅವರಿಂದ ಸ್ಫೂರ್ತಿ ಪಡೆದು ದೇಶವು ಬಾಹ್ಯ ಮತ್ತು ಆಂತರಿಕ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಮರ್ಥವಾಗುತ್ತಿದೆ. ಕಳೆದ ಏಳು ವರ್ಷಗಳಲ್ಲಿ ದೇಶವನ್ನು ಹಲವು ದಶಕಗಳ ಹಳೆಯ ಅನಗತ್ಯ ಕಾನೂನುಗಳಿಂದ ಹೇಗೆ ಮುಕ್ತಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

‘ಏಕ್ ಭಾರತ್, ಶ್ರೇಷ್ಠ್ ಭಾರತ್’ಗಾಗಿ ಪ್ರಾಣಾರ್ಪಣೆ ಮಾಡಿದ ಸರ್ದಾರ್ ಪಟೇಲ್ ಅವರಿಗೆ ರಾಷ್ಟ್ರವು ಗೌರವ ಸಲ್ಲಿಸುತ್ತಿದೆ ಎಂದು ಹೇಳಿದ ಮೋದಿ, ಪಟೇಲ್ ಅವರು ಇತಿಹಾಸದಲ್ಲಿ ಮಾತ್ರವಲ್ಲದೆ ಎಲ್ಲಾ ಭಾರತೀಯರ ಹೃದಯದಲ್ಲಿಯೂ ನೆಲೆಸಿದ್ದಾರೆ ಎಂದು ಹೇಳಿದರು.

ಶಾ ನಮನ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 146 ನೇ ಜನ್ಮದಿನದಂದು ಗುಜರಾತ್‌ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಗೌರವ ಸಲ್ಲಿಸಿದರು. ಕೆವಾಡಿಯಾದಲ್ಲಿ ‘ರಾಷ್ಟ್ರೀಯ ಏಕತಾ ದಿವಸ್’ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅಮಿತ್ ಶಾ ಅವರು ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.


Leave a Reply

error: Content is protected !!