ಬೀದರ್ : ಬೆಂಗಳೂರಿನಿಂದ ಬೀದರ್ ಗೆ ಆಗಮಿಸಿದ ಜನತಾ ಜಲಧಾರೆ ಯಾತ್ರೆಯ ರಥವನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್ ರವರು ಬೀದರ್ ಜಿಲ್ಲೆಗೆ ಸ್ವಾಗತಿಸಿಕೊಂಡರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನಿವಾಸದ ಆವರಣಕ್ಕೆ ಆಗಮಿಸಿದ ಜಲಧಾರೆ ರಥವನ್ನು ಸ್ವಾಗತಿಸಿದ ಜೆಡಿಎಸ್ ನಾಯಕರು, ರಥೆಕ್ಕೆ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ದೇವೇಗೌಡರು ಮತ್ತು ಕುಮಾರಸ್ವಾಮಿರವರ ಪರಿಕಲ್ಪನೆ ಮತ್ತು ಕನಸಿನಂತೆ ಜನತೆ ಜಲಧಾರೆ ಯಾತ್ರೆ ರಾಜ್ಯಾದ್ಯಂತ ಏಕಕಾಲಕ್ಕೆ ಆರಂಭವಾಗುತ್ತಿದೆ. ರಾಜ್ಯದ ನೀರಾವರಿ ಇನ್ನೂ ಯಾವ ಮಟ್ಟದಲ್ಲಿ ಮಾಡಬಹುದು ಎಂಬ ನಿಟ್ಟಿನಲ್ಲಿ ಮತ್ತು ನಮ್ಮ ಸರ್ಕಾರ ಬಂದರೇ ನಾವು ಕೈಗೊಳ್ಳುವ ಯೋಜನೆಗಳ ಬಗ್ಗೆ ರಾಜ್ಯಕ್ಕೆ ತಿಳಿಸುವ ಕಾರ್ಯಕ್ರಮವೇ ಜನತಾ ಜಲಧಾರೆ ಕಾರ್ಯಕ್ರಮವಾಗಿದೆ. ರಾಜ್ಯಾದ್ಯಂತ ಹದಿನೈದು ರಥಗಳು ಸಾಗಲಿವೆ.
ಕಮಲನಗರ ತಾಲೂಕಿನ ಸಂಗಮದಿಂದ ಈ ಭಾಗದ ಜನತಾ ಜಲಧಾರೆ ರಥ ಸಾಗಲಿದ್ದು, ಶನಿವಾರ ಬೆಳಗ್ಗೆ 10.30ಕ್ಕೆ ಜಲಧಾರೆ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡುವುದರೊಟ್ಟಿಗೆ ಈ ಕಾರ್ಯಕ್ರಮದ ಮೂಲಕ 2023ರಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಜಿಲ್ಲೆಯಲ್ಲಿ ನಡೆಯುವ ಜನತಾ ಜಲಧಾರೆ ಯಾತ್ರೆಯಲ್ಲಿ ಜಿಲ್ಲೆಯ ಜನತೆ ಪಾಲ್ಗೊಂಡು ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಬೇಕು. ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಜನತಾ ಜಲಧಾರೆ ಯಾತ್ರೆಯ ಯಶಸ್ವಿಗೆ ಶ್ರಮಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್ ರವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಸವರಾಜ ಪಾಟೀಲ್ ಹಾರೋಗೇರಿ, ಅಶೋಕ್ ಪಾಟೀಲ್ ಸಂಗೋಳಗಿ, ಮಲ್ಲಪ್ಪ ಮನ್ನಾಎಖೇಳ್ಳಿ, ಬಾಬುರಾವ್ ಸಂಗೋಳಗಿ, ಭೋಮಗೊಂಡ ಚಿಟ್ಟವಾಡಿ, ದಶರಥ ಸೇರಿದಂತೆ ಅನೇಕರಿದ್ದರು.