2022 ರ ಈ ಕಾಲಘಟದಲ್ಲಿ, ಗಟ್ಟಿಮುಟ್ಟಾದ ಜೀಪ್ ಪಡೆಯಲು ಲಕ್ಷ ಲಕ್ಷ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಆದರೆ, 1960 ರಲ್ಲಿ ಕೆಲವೇ ಸಾವಿರ ರೂಪಾಯಿಗಳಲ್ಲಿ ಪ್ರೀಮಿಯಂ ಮಹೀಂದ್ರಾ ಜೀಪ್ ಖರೀದಿಸಬಹುದಿತ್ತು. ಹೀಗಂತ ಸ್ವತಃ ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ.ಮಹೀಂದ್ರಾ ಮೋಟಾರ್ಸ್ನ ಸಿಇಒ ಆನಂದ್ ಮಹೀಂದ್ರಾ ಅವರು ವಿಲ್ಲಿಸ್ ಸಿಜೆ 3ಬಿ ಜೀಪ್ನ ಬೆಲೆ 12,421 ರೂ. ಎಂದು ತೋರಿಸುವ ಹಳೆಯ ಮುದ್ರಣ ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಜೀಪಿನ ಮೇಲೆ 200 ರೂ. ರಿಯಾಯಿತಿ ಘೋಷಣೆಯನ್ನು ಪತ್ರಿಕೆ ಜಾಹೀರಾತು ಪ್ರಕಟಿಸಲಾಗಿತ್ತು.
ಆದರೆ, ಇಂದು ಅದೇ ಜೀಪ್ ಖರೀದಿಸಬೇಕೆಂದರೆ 4.5 ಲಕ್ಷ ರೂ.ಗೂ ಹೆಚ್ಚು ಹಣ ಕೈಯಲ್ಲಿರಬೇಕು. ಮಹೀಂದ್ರದ ಬಹು ಮೆಚ್ಚುಗೆ ಪಡೆದಿರುವ ಥಾರ್ ಜೀಪ್ಗಳು ರೂ. 12 ಲಕ್ಷದಿಂದ 15 ಲಕ್ಷದವರೆಗೆ ದುಬಾರಿಯಾಗಿದೆ. ಈ ದರಗಳನ್ನು ಪರಿಗಣಿಸಿದ್ರೆ, 1960ರಲ್ಲಿ ಎಷ್ಟು ಕಡಿಮೆಯಿತ್ತಲ್ವಾ ಜೀಪಿನ ಬೆಲೆ ಅಂತಾ ಅನಿಸದೆ ಇರದು.
ಈ ಪೋಸ್ಟ್ ಅನ್ನು ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅನೇಕ ನೆಟ್ಟಿಗರು ತಮ್ಮ ಆರ್ಡರ್ಗಳನ್ನು ಹಳೆಯ ದರದಲ್ಲಿ ಇರಿಸುವಂತೆ ಆನಂದ್ ಮಹೀಂದ್ರಾ ಅವರನ್ನು ತಮಾಷೆಯಾಗಿ ಕೇಳಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರಾ ಜಾಣತನದಿಂದ ಪ್ರತಿಕ್ರಿಯಿಸಿದ್ದಾರೆ. ಇಂದು ನಮ್ಮ ಯಾವ ಪರಿಕರಗಳನ್ನು ನೀವು ಈ ಮೊತ್ತದಲ್ಲಿ ಖರೀದಿಸಬಹುದು ಅಂತಾ ಲೆಕ್ಕಾಚಾರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.