Please assign a menu to the primary menu location under menu

Entertainment

ಹೀಗಿತ್ತು ‌ʼಪವರ್‌ ಸ್ಟಾರ್ʼ ಪುನೀತ್​ ರಾಜ್​ಕುಮಾರ್​ ನಡೆದು ಬಂದ ಹಾದಿ

ಹೀಗಿತ್ತು ‌ʼಪವರ್‌ ಸ್ಟಾರ್ʼ ಪುನೀತ್​ ರಾಜ್​ಕುಮಾರ್​ ನಡೆದು ಬಂದ ಹಾದಿ

ಚಂದನವನ ಕಂಡ ಅಪ್ರತಿಮ ನಟ ದೊಡ್ಮನೆ ಕುಟುಂಬದ ಕುಡಿ ಪುನೀತ್​ ರಾಜ್​ಕುಮಾರ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬರಸಿಡಿಲಿನಂತೆ ಬಂದೆರಗಿದ ಈ ಸುದ್ದಿ ಇಡೀ ರಾಜ್ಯವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

1975ರ ಮಾರ್ಚ್​ 17ರಂದು ವರನಟ ದಿವಂಗತ ಡಾ. ರಾಜಕುಮಾರ್​​ ಹಾಗೂ ದಿ. ಪಾರ್ವತಮ್ಮ ಅವರ ಕಿರಿಯ ಪುತ್ರನಾಗಿ ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಪುನೀತ್​ ರಾಜ್​ಕುಮಾರ್​ ಜನಿಸಿದ್ದರು. ನಟನಾ ಕುಟುಂಬದ ಕುಡಿಯಾಗಿದ್ದರಿಂದ ಪುನೀತ್​ ರಾಜ್​ಕುಮಾರ್​​ಗೆ ನಟನೆ ಅನ್ನೋದು ರಕ್ತದಲ್ಲಿಯೇ ಕರಗತವಾಗಿತ್ತು.

ರಾಜ್​ಕುಮಾರ್​ ಸಿನಿಮಾಗಳಲ್ಲಿ ಅತ್ಯಂತ ಬ್ಯುಸಿಯಾಗಿದ್ದ ಕಾಲವದು. ತಂದೆಯ ಕೈ ಹಿಡಿದು ಪುಟ್ಟ ಮಗು ಅಪ್ಪು ಶೂಟಿಂಗ್​ ಸ್ಥಳಗಳಿಗೆ ತೆರಳುತ್ತಿದ್ದರು. ಪುನೀತ್​ ರಾಜ್​ಕುಮಾರ್​ ಜೊತೆಯಲ್ಲಿ ಸಹೋದರಿ ಪೂರ್ಣಿಮಾ ಕೂಡ ಬರುತ್ತಿದ್ದರಂತೆ. ಆಟಿಕೆಗಳನ್ನು ಆಡುವ ಬಾಲ್ಯದ ಸಮಯದಲ್ಲಿಯೇ ಪುನೀತ್​ ಮಾತ್ರ ಬಣ್ಣ ಹಚ್ಚಲು ತಯಾರಾಗುತ್ತಿದ್ದರು.

ನಟ ಪುನೀತ್​​​ ರಾಜ್​ಕುಮಾರ್​ ನಟಿಸಿದ ಮೊಟ್ಟ ಮೊದಲ ಸಿನಿಮಾ ಪ್ರೇಮದ ಕಾಣಿಕೆ. 1975ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಅಭಿನಯಿಸುವ ವೇಳೆ ಅಪ್ಪುಗೆ ಕೇವಲ 6 ತಿಂಗಳ ಪ್ರಾಯ..! 6 ತಿಂಗಳ ಹಸುಗೂಸು ಪುನೀತ್​ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ತೆರೆಯ ಮೇಳೆ ಕಾಣಿಸಿಕೊಂಡಿದ್ದರು.

ಇದಾದ ಬಳಿಕ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಎರಡು ನಕ್ಷತ್ರಗಳು, ಶಿವ ಮೆಚ್ಚಿದ ಕಣ್ಣಪ್ಪ,ಪರಶುರಾಮ, ಯಾರಿವನು, ಭಾಗ್ಯವಂತ , ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಾಲ ನಟನಾಗಿ ಬಣ್ಣ ಹಚ್ಚುವ ಮೂಲಕ ಅಭಿನಯದಲ್ಲಿ ಸೈ ಎನಿಸಿಕೊಂಡರು.

ಪುನೀತ್​ ರಾಜ್​ಕುಮಾರ್​ರ ಪ್ರತಿಭೆ ಅಭಿನಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬಾಲ ನಟನಾಗಿಯೂ ಸೈ ಎನಿಸಿಕೊಂಡಿದ್ದ ಅಪ್ಪು ʼಭಾಗ್ಯವಂತʼ ಸಿನಿಮಾದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಯಾರಿವನು ಸಿನಿಮಾದ ಕಣ್ಣಿಗೆ ಕಾಣುವ ದೇವರು, ಚಲಿಸುವ ಮೋಡಗಳು ಸಿನಿಮಾದ ಕಾಣದಂತೆ ಮಾಯವಾದನೋ ನಮ್ಮ ಶಿವ ಎಂಬ ಗೀತೆಗಳಿಗೆ ದನಿಯಾಗುವ ಮೂಲಕ ಖ್ಯಾತಿ ಗಳಿಸಿದ್ದರು.

ಪುನೀತ್​ ರಾಜ್​ಕುಮಾರ್​ ನಟಿಸಿದ ಬೆಟ್ಟದ ಹೂ ಸಿನಿಮಾದ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಆಂಗ್ಲ ಕಾದಂಬರಿ ʼವಾಟ್​​ ದೆನ್​ ರಾಮನ್​ʼ ಆಧಾರಿತ ಈ ಸಿನಿಮಾದಲ್ಲಿ ಅಪ್ಪು ಬಡ ಬಾಲಕನಾಗಿ ನಟಿಸಿದ್ದರು ಎನ್​. ಲಕ್ಷ್ಮೀ ನಾರಾಯಣ ನಿರ್ದೇಶನದ ಈ ಸಿನಿಮಾ 1984ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದ ನಟನೆಗಾಗಿ ಪುನೀತ್​​ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು.

ಇನ್ನುಳಿದಂತೆ ಚಲಿಸುವ ಮೋಡಗಳು ಹಾಗೂ ಎರಡು ನಕ್ಷತ್ರಗಳು ಸಿನಿಮಾದ ಅಭಿನಯಕ್ಕಾಗಿ ಪುನೀತ್​ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುಟ್ಟ ಕಂದಮ್ಮನಿಂದಲೇ ಅಭಿಮಾನಿಗಳನ್ನು ರಂಜಿಸುತ್ತಿದ್ದ ಪುನೀತ್​​ ಇದೀಗ ಇಹಲೋಕ ಯಾತ್ರೆ ಮುಗಿಸಿದ್ದಾರೆ. ನಿರೀಕ್ಷೆಯೇ ಮಾಡಿರದ ಈ ಸುದ್ದಿ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗಲಾರದು.

 


Leave a Reply

error: Content is protected !!