ಬೆಳಗಾವಿ:ಜಿಲ್ಲೆಯ ಆಡಳಿತದ ನೊಗ ಹೊತ್ತು ಬಂದಿರುವ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬೆಳಗಾವಿಗಾಗಿಯೇ ತಮ್ಮ ಕ್ರಿಯಾತ್ಮಕ ಯೋಜನೆ ಯೋಚನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಈಗ ತಮ್ಮ ಕಚೇರಿಯನ್ನು ‘ಪೇಪರ್ ರಹಿತ ಕಚೇರಿ’ ಎಂದು ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಇನ್ಮುಂದೆ ‘ಇ -ಆಫೀಸ್’ ಆಗಿ ಪರಿವರ್ತನೆ ಆಗಲಿದೆ.
ರಾಜ್ಯದಲ್ಲಿ ಆಡಳಿತಾತ್ಮಕವಾಗಿ ಬೆಂಗಳೂರು ನಂತರ ಎರಡನೇ ಮುಖ್ಯ ಜಿಲ್ಲೆಯಾಗಿ ಗಮನ ಸೆಳೆದಿರುವ ಬೆಳಗಾವಿಗೆ ಈಗ ‘ಬೆಳಗಾವಿ ನಗರಕ್ಕೆ(Smart & Elegant Archs) ಸ್ವಾಗತ’ ಕಮಾನುಗಳನ್ನು ನಿಲ್ಲಿಸಲು ಜಿಲ್ಲಾಧಿಕಾರಿ ಡಾ. ನಿತೇಶ ಮನಸ್ಸು ಮಾಡಿದ್ದು ಸದ್ಯದಲ್ಲೆ ಮಹಾನಗರ ಪಾಲಿಕೆಯ ಮೂಲಕ ಇದು ಕಾರ್ಯರೂಪಕ್ಕೆ ಬರಲಿದೆ.
ನಗರ ಸುಂದರೀಕರಣಕ್ಕೆ ಜಿಲ್ಲಾಡಳಿತದ ನಿರ್ಧಾರದಂತೆ ಮಹಾನಗರ ಪಾಲಿಕೆ ದುಡಿಯಲಿದೆ ಎಂದು ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.
*ಹಳದಿ ಕೆಂಪು ಹೂವಿನ ತೋರಣ:*
ಜಿಲ್ಲಾಧಿಕಾರಿ ಯೋಜನೆ ಯೋಚನೆಗೆ ಬೆಳಗಾವಿ ಡಿಸಿಎಫ್ ಹರ್ಷಭಾನು ಸಹ ಸಹಮತ ವ್ಯಕ್ತಪಡಿಸಿದ್ದು, ಸ್ವಾಗತ ಕಮಾನುಗಳಿಗೆ ಅನುಗುಣವಾಗಿ ಹಳದಿ ಮತ್ತು ಕೆಂಪು ಹೂವು ಬಿಡುವ ಗಿಡಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಗರದ ಎಲ್ಲ ಪ್ರವೇಶ ದ್ವಾರಗಳಲ್ಲಿ ನೆಡಲಾಗುವುದು ಎಂದು ಡಿಸಿಎಫ್ ಹರ್ಷಭಾನು ತಿಳಿಸಿದ್ದಾರೆ.
ಮುಂಬರುವ ಮಾನ್ಸೂನ್ ಅವಧಿಯೊಳಗೆ ಅರಣ್ಯ ಇಲಾಖೆಯೂ, ಮಹಾನಗರ ಪಾಲಿಕೆಯೊಂದಿಗೆ ಸಂಯೋಜನೆ ಸಾಧಿಸಿ ಇನ್ನಿತರ ಅವಶ್ಯಕ ಮರಗಳನ್ನು ನೆಡಲಿದೆ ಎಂದಿದ್ದಾರೆ ಹರ್ಷಭಾನು.
ಆಡಳಿತ, ಆರ್ಥಿಕ ಮತ್ತು ರಾಜಕೀಯವಾಗಿ ಬಹಳ ಸಮರ್ಥ ನಗರ ಬೆಳಗಾವಿಯ ಭೌತಿಕ ಚಿತ್ರಣವನ್ನು ಸ್ಮಾರ್ಟ್ ನಗರಕ್ಕೆ ತಕ್ಕಂತೆ ಬದಲಾಯಿಸುವ ಯೋಚನೆ ಜಿಲ್ಲಾಧಿಕಾರಿ ಹೊಂದಿದ್ದು, ನಗರ ಪ್ರವೇಶಿಸುವ ಎಲ್ಲ ಮಾರ್ಗಗಳ ಸುಂದರೀಕರಣ ಮತ್ತು ಸುಸಜ್ಜಿತ ವ್ಯವಸ್ಥೆ ಮಾಡುವಂತೆ ಈಗಾಗಲೇ ಪಾಲಿಕೆಗೆ ಸೂಚಿಸಿದ್ದಾರೆ.
ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ಬುಡಾ, ತೋಟಗಾರಿಕೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ನಗರ ಸುಂದರೀಕರಣ ಮತ್ತು ಸುವ್ಯವಸ್ಥೆಗೆ ಸಂಯೋಜನೆಯ ಕೆಲಸ ಮಾಡಬೇಕಿರುವುದು ಗಮನ ಸೆಳೆದಿದೆ.