ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ನಡೆದ ರೆಡ್ ಪ್ರೀಮಿಯರ್ ಲೀಗ್ (RPL) ಸೆಮಿಫೈನಲ್ ಪಂದ್ಯದ ವೇಳೆ ಕಾಶ್ಮೀರಿ ಕ್ರಿಕೆಟಿಗ ಜಹಾಂಗೀರ್ ಲೋನ್ ವೀಕ್ಷಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ರಾಯಲ್ ಗುಡ್‌ವಿಲ್ ಸಿಸಿ ತಂಡವನ್ನು ಪ್ರತಿನಿಧಿಸುತ್ತಿದ್ದ ಜಹಾಂಗೀರ್ ಲೋನ್, ಪಂದ್ಯ ಮುಗಿದ ಬಳಿಕ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಪಂದ್ಯದಲ್ಲಿ ಅಥ್ವಾಸ್ ಇಂಡಿಯಾ ಇಲೆವೆನ್ ತಂಡವು ರಾಯಲ್ ಗುಡ್‌ವಿಲ್ ಸಿಸಿ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಈ ವೇಳೆ ಗೆದ್ದ ತಂಡದ ಬೆಂಬಲಿಗರು ಮೈದಾನಕ್ಕೆ ಇಳಿದು ಸಂಭ್ರಮಿಸಲು ಶುರು ಮಾಡಿದ್ದರು. ಸೋತ ತಂಡದ ಆಟಗಾರರು ಪೆವಿಲಿಯನ್‌ತ್ತ ಹೆಜ್ಜೆ ಹಾಕುತ್ತಿದ್ದಂತೆ, ವೀಕ್ಷಕರೊಬ್ಬರು ಮತ್ತು ಜಹಾಂಗೀರ್ ಲೋನ್ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಬಿಳಿ ಸ್ವೆಟ್‌ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ವ್ಯಕ್ತಿಯೊಬ್ಬರ ಮೇಲೆ ಜಹಾಂಗೀರ್ ದಾಳಿ ನಡೆಸಿ, ಮುಷ್ಟಿಯಿಂದ ಹಲ್ಲೆ ಮಾಡುತ್ತಿರುವುದು ಸೆರೆಯಾಗಿದೆ. ಸುತ್ತಲೂ ಇದ್ದ ಇತರ ಆಟಗಾರರು ಹಾಗೂ ಪ್ರೇಕ್ಷಕರು ಜಹಾಂಗೀರ್ ಅವರನ್ನು ತಡೆಯಲು ಪ್ರಯತ್ನಿಸಿದರೂ, ಗಲಾಟೆ ಮುಂದುವರಿದಿತ್ತು.
ಸಮಜಾಯಿಷಿ ನೀಡಿದ ಆಟಗಾರ:
ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಜಹಾಂಗೀರ್ ಲೋನ್, ಪೆವಿಲಿಯನ್‌ಗೆ ತೆರಳುವಾಗ ಎದುರಾಳಿ ತಂಡದ ಬೆಂಬಲಿಗರು ತಮ್ಮ ತಾಯಿಯನ್ನು ನಿಂದಿಸುವಂತಹ ತೀರಾ ಕೆಟ್ಟ ಪದಗಳನ್ನು ಬಳಸಿದರು. ತಾಯಿಗೆ ಕೆಟ್ಟ ಮಾತುಗಳಿಂದ ನಿಂದಿಸಿದ್ದನ್ನು ಸಹಿಸಲು ಸಾಧ್ಯವಾಗದೆ, ಕೋಪದ ಕೈಗೆ ಬುದ್ಧಿ ಕೊಟ್ಟು ಆ ಕ್ಷಣದಲ್ಲಿ ಹತೋಟಿ ಕಳೆದುಕೊಂಡೆ ಎಂದು ತಮ್ಮ ನಡವಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.