ಮುಂಬೈ: ಹರಿಯಾಣದ ಖ್ಯಾತ ಗಾಯಕಿ, ನೃತ್ಯಗಾರ್ತಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸಪ್ನಾ ಚೌಧರಿ ತಮ್ಮ ಆರು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಪತಿ ವೀರ್ ಸಾಹು ಅವರಿಂದ ವಿಚ್ಛೇದನ ಪಡೆಯಲು ಸಪ್ನಾ ಅರ್ಜಿ ಸಲ್ಲಿಸಿದ್ದು, ಈ ಮೂಲಕ ತಮ್ಮ ವೈವಾಹಿಕ ಸಂಬಂಧವನ್ನು ಅಧಿಕೃತವಾಗಿ ಕೊನೆಗೊಳಿಸಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಎನ್‌ಎಂಎಫ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸಪ್ನಾ ಚೌಧರಿ ತಮ್ಮ ವಿಚ್ಛೇದನದ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಇದೇ ವೇಳೆ ಪ್ರೀತಿ, ಸಂಬಂಧದಲ್ಲಿನ ನಂಬಿಕೆ ದ್ರೋಹ ಹಾಗೂ ಮದುವೆಯ ನಂತರ ತಮ್ಮ ವೈಯಕ್ತಿಕ ಮತ್ತು ವೃತ್ತಿಜೀವನದ ಮೇಲಾದ ಪರಿಣಾಮಗಳ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ತಮ್ಮ ಸಂಬಂಧ ಮುರಿಯಲು ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಪ್ನಾ, ನಮ್ಮ ನಡುವೆ ಏನಾಯಿತು ಎಂಬುದು ನನಗೆ ಮತ್ತು ವೀರ್ ಅವರಿಗೆ ಮಾತ್ರ ಗೊತ್ತಿದೆ ಎಂದು ಹೇಳಿದ್ದಾರೆ. ಸಂಬಂಧ ಚೆನ್ನಾಗಿದ್ದಾಗ ಒಟ್ಟಿಗೆ ಇರಲು ನಿರ್ಧರಿಸಿದ್ದೆವು, ಆದರೆ ದಾಂಪತ್ಯ ಮುಂದುವರಿಸಲು ಸಾಧ್ಯವೇ ಇಲ್ಲ ಎಂಬ ಹಂತ ತಲುಪಿದಾಗ ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಪತಿಯಿಂದ ನಂಬಿಕೆ ದ್ರೋಹ ನಡೆದಿರುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿರುವ ಅವರು, ಪ್ರೀತಿ ಎಂದರೆ ಕೇವಲ ದೈಹಿಕ ಆಕರ್ಷಣೆಯಲ್ಲ, ಅದು ಆತ್ಮಕ್ಕೆ ಮತ್ತು ಭಾವನೆಗಳಿಗೆ ಸಂಬಂಧಿಸಿದ್ದು. ಆದರೆ ಪುರುಷರು ಹೆಚ್ಚು ಪ್ರಾಯೋಗಿಕವಾಗಿ ಯೋಚಿಸಿದರೆ, ಮಹಿಳೆಯರು ಭಾವನೆಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.
ಬಿಗ್ ಬಾಸ್ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಸಂದರ್ಭದಲ್ಲಿ ಸಪ್ನಾ ಮದುವೆಯಾಗಿದ್ದರು. ಪತ್ನಿಯಾಗಿ, ತಾಯಿಯಾಗಿ ಮತ್ತು ಸೊಸೆಯಾಗಿ ತಮ್ಮೆಲ್ಲಾ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿದ್ದೇನೆ. ಆದರೆ ಈ ನಡುವೆ ನನಗೆ ನಾನೇ ಆದ್ಯತೆ ನೀಡುವುದನ್ನು ನಿಲ್ಲಿಸಿದ್ದೆ ಮತ್ತು ನನ್ನ ಸ್ವಂತ ಗುರುತು ಹಾಗೂ ವೃತ್ತಿಜೀವನದ ಕನಸುಗಳನ್ನು ಕಳೆದುಕೊಂಡಿದ್ದೆ ಎಂಬುದು ತಡವಾಗಿ ಅರಿವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಮತ್ತೊಂದು ಮದುವೆಯಾಗುವ ಯೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಪ್ನಾ, ಸದ್ಯಕ್ಕೆ ಮರುಮದುವೆಯ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂದಿದ್ದಾರೆ. ತಾನು ಪ್ರೀತಿಸಿದರೆ ಅತ್ಯಂತ ಗಾಢವಾಗಿ ಪ್ರೀತಿಸುವ ವ್ಯಕ್ತಿ, ಹಾಗಾಗಿ ನನ್ನ ಪ್ರೀತಿಗೆ ಅರ್ಹರಾದವರು ಸಿಕ್ಕರೆ ಮಾತ್ರ ಮುಂದಿನ ಸಂಬಂಧದ ಬಗ್ಗೆ ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಪ್ನಾ ಚೌಧರಿ ಮತ್ತು ಹರಿಯಾಣದ ಗಾಯಕ, ನಟ ವೀರ್ ಸಾಹು 2020ರಲ್ಲಿ ಅತ್ಯಂತ ಖಾಸಗಿಯಾಗಿ ವಿವಾಹವಾಗಿದ್ದರು. ಮೊದಲ ಮಗುವಿನ ಜನನದ ನಂತರವಷ್ಟೇ ಇವರ ಮದುವೆಯ ವಿಚಾರ ಜಗತ್ತಿಗೆ ತಿಳಿದಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹರಿಯಾಣದ ಸಂಗೀತ ಮತ್ತು ನೃತ್ಯದ ಮೂಲಕ ಮನೆಮಾತಾಗಿದ್ದ ಸಪ್ನಾ, ಬಿಗ್ ಬಾಸ್ 11ನೇ ಸೀಸನ್‌ನಲ್ಲಿ ಭಾಗವಹಿಸಿದ ಬಳಿಕ ದೇಶಾದ್ಯಂತ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದರು.