ತಿಂಗಳ ಆರಂಭವಾಗುತ್ತಿದ್ದಂತೆ ಮನೆಯ ಖರ್ಚಿನ ಲೆಕ್ಕಾಚಾರವೂ ಬದಲಾಗುತ್ತದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗುತ್ತದೆಯೇ ಎಂಬ ಆತಂಕ ಒಂದೆಡೆಯಾದರೆ, ಕ್ರೆಡಿಟ್ ಕಾರ್ಡ್ ಬಳಕೆ, ಬ್ಯಾಂಕ್ ಬಡ್ಡಿದರ ಹಾಗೂ ಆಧಾರ್ ಅಪ್‌ಡೇಟ್ ನಿಯಮಗಳ ಬದಲಾವಣೆ ಮತ್ತೊಂದೆಡೆ ಜನರ ಗಮನ ಸೆಳೆಯುತ್ತಿವೆ.
ಇದೀಗ ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು ನಿಮ್ಮ ಜೇಬಿನ ಮೇಲೆ ಯಾವ ರೀತಿಯ ಪರಿಣಾಮ ಬೀರಲಿವೆ? ಯಾವುದು ದುಬಾರಿಯಾಗಬಹುದು, ಯಾವುದರಿಂದ ಅನುಕೂಲವಾಗಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.
ಡಿಸೆಂಬರ್ 2026ರಿಂದ ಹಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಈ ನಿಯಮಗಳು ಸಾಮಾನ್ಯ ಜನರ ಆರ್ಥಿಕ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರಲಿವೆ. ಕ್ರೆಡಿಟ್ ಕಾರ್ಡ್ ವಹಿವಾಟು, ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಹೂಡಿಕೆ ನಿಯಮಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.
1. ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ರೆಡಿಟ್ ಕಾರ್ಡ್ ಬಳಕೆದಾರರು ಕೆಲವು ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಬಹುದು. ಹೊಸ ನಿಯಮಗಳ ಪ್ರಕಾರ, ಒಬ್ಬ ಗ್ರಾಹಕ ಒಂದೇ ವಹಿವಾಟಿನಲ್ಲಿ ಸಾರಿಗೆಗಾಗಿ ₹30,000ಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಇನ್ನು ಇಂಧನ ಖರೀದಿ ವಿಚಾರದಲ್ಲಿ ಒಂದು ಬಿಲ್ಲಿಂಗ್ ಅವಧಿಯಲ್ಲಿ ಒಟ್ಟು ಖರ್ಚು ₹50,000 ಮೀರಿದರೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಂದರೆ, ಈ ಶುಲ್ಕವು ಮಿತಿಯನ್ನು ಮೀರಿದ ಮೊತ್ತಕ್ಕೆ ಮಾತ್ರವಲ್ಲದೆ, ಒಟ್ಟು ಇಂಧನ ಬಿಲ್‌ಗೆ ಅನ್ವಯವಾಗಲಿದೆ.
2. ಆರ್‌ಬಿಐ ರೆಪೋ ದರದ ಕುರಿತು ಮಹತ್ವದ ನಿರ್ಧಾರ
ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ 2ರಿಂದ 4ರವರೆಗೆ ನಡೆಯಲಿರುವ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಬಡ್ಡಿದರವನ್ನು ಪರಿಶೀಲಿಸಲಾಗುತ್ತದೆ.
ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಆರ್‌ಬಿಐ ರೆಪೋ ದರವನ್ನು ಶೇ.0.25ರಷ್ಟು ಹೆಚ್ಚಿಸಿ ಶೇ.5.50ಕ್ಕೆ ನಿಗದಿಪಡಿಸಿತ್ತು. ಈ ಬಾರಿ ಬಡ್ಡಿದರದ ಕುರಿತು ಕೈಗೊಳ್ಳುವ ನಿರ್ಧಾರವು ಗೃಹ ಸಾಲ ಸೇರಿದಂತೆ ವಿವಿಧ ಸಾಲಗಳ ಮಾಸಿಕ ಕಂತು (EMI) ಹಾಗೂ ಉಳಿತಾಯದ ಮೇಲೆ ನೇರ ಪರಿಣಾಮ ಬೀರಬಹುದು.
3. ಸಾಲ ಮತ್ತು ಫಿಕ್ಸೆಡ್ ಡೆಪಾಸಿಟ್ ನಿಯಮಗಳಲ್ಲಿ ಬದಲಾವಣೆ
ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದರೆ ಬ್ಯಾಂಕ್‌ಗಳ ಬಡ್ಡಿದರಗಳ ಮೇಲೂ ಪರಿಣಾಮ ಬೀರಬಹುದು. ಬ್ಯಾಂಕ್‌ಗಳು ಗೃಹ ಸಾಲ ಸೇರಿದಂತೆ ಇತರ ಫ್ಲೋಟಿಂಗ್ ಬಡ್ಡಿದರದ ಸಾಲಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಬಹುದು. ಇದರಿಂದ ಗ್ರಾಹಕರ ಮಾಸಿಕ ಇಎಂಐ ಹೆಚ್ಚಾಗಬಹುದು ಅಥವಾ ಸಾಲ ಮರುಪಾವತಿ ಅವಧಿ ವಿಸ್ತರಣೆಯಾಗಬಹುದು.
ಮತ್ತೊಂದೆಡೆ, ಫಿಕ್ಸೆಡ್ ಡೆಪಾಸಿಟ್ (FD) ನಲ್ಲಿ ಹೂಡಿಕೆ ಮಾಡುವವರಿಗೆ ಇದು ಅನುಕೂಲವಾಗುವ ಸಾಧ್ಯತೆಯಿದೆ. ಬ್ಯಾಂಕ್‌ಗಳು ಹೊಸ ಎಫ್‌ಡಿಗಳ ಮೇಲೆ ತುಸು ಹೆಚ್ಚಿನ ಬಡ್ಡಿದರ ನೀಡಬಹುದು. ಆದರೆ, ಬ್ಯಾಂಕ್‌ಗಳು ತಮ್ಮ ಅಗತ್ಯತೆಗಳು ಮತ್ತು ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಸಾಲ ಹಾಗೂ ಎಫ್‌ಡಿ ಬಡ್ಡಿದರಗಳನ್ನು ನಿರ್ಧರಿಸುತ್ತವೆ.
4. ಆಧಾರ್ ಕಾರ್ಡ್ ಇಮೇಲ್ ಅಪ್‌ಡೇಟ್ ನಿಯಮ
ಆಧಾರ್ ಕಾರ್ಡ್‌ನಲ್ಲಿ ಇಮೇಲ್ ವಿಳಾಸವನ್ನು ಸೇರಿಸಲು ಅಥವಾ ಅಪ್‌ಡೇಟ್ ಮಾಡಲು ಪ್ರಸ್ತುತ ಯುಐಡಿಎಐ (UIDAI) ₹75 ಶುಲ್ಕ ವಿಧಿಸುತ್ತಿಲ್ಲ. ಈ ಉಚಿತ ಸೌಲಭ್ಯ ಡಿಸೆಂಬರ್ 31ರವರೆಗೆ ಲಭ್ಯವಿರಲಿದೆ.
ಆದರೆ, ಅಧಿಕೃತ ಆಧಾರ್ ಮೊಬೈಲ್ ಆ್ಯಪ್ ಮೂಲಕ ಇಮೇಲ್ ವಿಳಾಸವನ್ನು ಅಪ್‌ಡೇಟ್ ಮಾಡಿದರೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಹೀಗಾಗಿ, ಆಧಾರ್ ಕಾರ್ಡ್‌ಗೆ ಹೊಸ ಇಮೇಲ್ ವಿಳಾಸ ಸೇರಿಸಲು ಅಥವಾ ಹಳೆಯ ವಿಳಾಸ ಬದಲಾಯಿಸಲು ಬಯಸುವವರು ಡಿಸೆಂಬರ್ 31ರೊಳಗೆ ಈ ಕೆಲಸ ಪೂರ್ಣಗೊಳಿಸಬೇಕು. ಆನಂತರ ಸಾಮಾನ್ಯ ಶುಲ್ಕ ಅನ್ವಯವಾಗುವ ಸಾಧ್ಯತೆಯಿದೆ.
5. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ?
ಪ್ರತಿ ತಿಂಗಳ ಆರಂಭದಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಅದರಂತೆ, ಡಿಸೆಂಬರ್ 1ರಂದು ಗೃಹ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಹೊಸ ದರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ವಿಶೇಷವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ವ್ಯಾಪಾರಿಗಳು 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿನ ಬದಲಾವಣೆಗಳ ಮೇಲೆ ಗಮನಹರಿಸಿದ್ದಾರೆ.
ಇನ್ನು 14.2 ಕೆ.ಜಿ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗುತ್ತದೆಯೇ ಅಥವಾ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸಿಲಿಂಡರ್ ಬೆಲೆಯಲ್ಲಿನ ಬದಲಾವಣೆ ಸಾಮಾನ್ಯ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.
6) ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಬದಲಾವಣೆ?
ಭಾರತದ ಆಮದು ವೆಚ್ಚದಲ್ಲಿ ಕಚ್ಚಾ ತೈಲ ಪ್ರಮುಖ ಪಾಲು ಹೊಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತವಾದರೆ ಅದರ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೂ ಬೀಳುತ್ತದೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಜಾಗತಿಕ ತೈಲ ಹಾಗೂ ಅನಿಲ ಪೂರೈಕೆಗೆ ಅಡ್ಡಿಯಾಗಿದ್ದರೂ, 2026ರ ಜೂನ್‌ನಿಂದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿಲ್ಲ ಅಥವಾ ಕಡಿತಗೊಳಿಸಿಲ್ಲ.
ಆದರೆ ಕಳೆದ ಒಂದು ತಿಂಗಳಲ್ಲಿ ಅಮೆರಿಕದ WTI ಕಚ್ಚಾ ತೈಲ ಬೆಲೆ ಸುಮಾರು ಶೇ.22ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 79.5 ಡಾಲರ್‌ಗೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆಯೂ ಶೇ.23.4ರಷ್ಟು ಇಳಿಕೆಯಾಗಿ ಸುಮಾರು 88.5 ಡಾಲರ್‌ಗೆ ಬಂದಿದೆ.
7)ಎನ್‌ಆರ್‌ಐಗಳು, ವಿದೇಶಿಯರಿಗೆ ಇ-ಕೆವೈಸಿ ಸೌಲಭ್ಯ
2026ರ ಡಿಸೆಂಬರ್ 3ರಿಂದ ಅನಿವಾಸಿ ಭಾರತೀಯರು (NRI), ಸಾಗರೋತ್ತರ ಭಾರತೀಯ ನಾಗರಿಕರು (OCI) ಮತ್ತು ವಿದೇಶಿ ಪ್ರಜೆಗಳ ಕೆವೈಸಿ (KYC) ನಿಯಮಗಳಲ್ಲಿ ಸೆಬಿ ಬದಲಾವಣೆ ತರಲಿದೆ.
ಹೊಸ ನಿಯಮದ ಪ್ರಕಾರ, ಈ ಹೂಡಿಕೆದಾರರು ಸೆಬಿಯಲ್ಲಿ ನೋಂದಾಯಿತ ಹಣಕಾಸು ಮಧ್ಯವರ್ತಿಗಳ ಮೂಲಕ ದೂರದಿಂದಲೇ ಕೆವೈಸಿ ಪರಿಶೀಲನೆ ಪೂರ್ಣಗೊಳಿಸಲು ಅವಕಾಶ ನೀಡಲಾಗುತ್ತದೆ.
ಅಮೆರಿಕ, ಕೆನಡಾ ಮತ್ತು ಬ್ರಿಟನ್ ಸೇರಿದಂತೆ ಹಣಕಾಸು ಕ್ರಿಯಾ ಕಾರ್ಯಪಡೆಯ (FATF) ಮಾನದಂಡಗಳನ್ನು ಪಾಲಿಸುವ ದೇಶಗಳಲ್ಲಿ ಇರುವ ಅರ್ಹ ವ್ಯಕ್ತಿಗಳಿಗೆ ಈ ಸೌಲಭ್ಯ ದೊರೆಯಲಿದೆ.
8) ಡೆರಿವೇಟಿವ್ಸ್ ಮಾರ್ಜಿನ್ ನಿಯಮಗಳಲ್ಲಿ ಬದಲಾವಣೆ
ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಕೃಷಿ ಮತ್ತು ಕೃಷಿಯೇತರ ಸರಕುಗಳ ಡೆರಿವೇಟಿವ್ಸ್ ವಹಿವಾಟಿನ ಮಾರ್ಜಿನ್ ನಿಯಮಗಳನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.
ಕೋಟಕ್ ನಿಯೋ ವರದಿಯ ಪ್ರಕಾರ, ಸಾರ್ವಜನಿಕ ವಹಿವಾಟಿಗೆ ಲಭ್ಯವಿರುವ ಷೇರುಗಳ ಪೈಕಿ ಮಾರ್ಜಿನ್ ಆಧಾರಿತ ಹೂಡಿಕೆಗಳು ಶೇ.5ರಿಂದ ಶೇ.10ರಷ್ಟು ಮಿತಿಯನ್ನು ಮೀರಿದರೆ, ಅಂತಹ ಷೇರುಗಳಲ್ಲಿ ಹೊಸ ಖರೀದಿಗೆ ಬ್ರೋಕರ್‌ಗಳು ಹಣಕಾಸು ನೆರವು ನೀಡುವುದನ್ನು ಈ ಪ್ರಸ್ತಾವನೆ ತಡೆಯಬಹುದು.
ಸೂಚನೆ: ಮೇಲಿನ ಕೆಲವು ಬದಲಾವಣೆಗಳು ನಿರೀಕ್ಷಿತವಾಗಿದ್ದು, ಅಂತಿಮ ನಿಯಮಗಳು ಮತ್ತು ದರಗಳು ಸಂಬಂಧಪಟ್ಟ ಸಂಸ್ಥೆಗಳ ಅಧಿಕೃತ ಪ್ರಕಟಣೆಯ ನಂತರವೇ ಖಚಿತವಾಗಲಿವೆ.