ಸಾಮಾಜಿಕ ಜಾಲತಾಣಗಳು ಅಸ್ತಿತ್ವಕ್ಕೆ ಬರುವ ಮೊದಲೇ ಕನ್ನಡ ಭಾಷೆ ಜನರ ನಡುವೆ ಸಹಜವಾಗಿ ಹೇಗೆ ಹರಡಿತು? ನಟರು, ಸಾಹಿತಿಗಳು ಮತ್ತು ಕವಿಗಳು ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಪರಿಚಯಿಸುವಲ್ಲಿ ಯಾವ ರೀತಿಯ ಪಾತ್ರ ವಹಿಸಿದ್ದಾರೆ ? ಕನ್ನಡದ ಹೆಮ್ಮೆ, ಸಂಸ್ಕೃತಿ ಮತ್ತು ಕನ್ನಡಿಗರ ಗುರುತಿನ ಬಗ್ಗೆ ಹಿರಿಯ ನಟ ಶಿವರಾಜ್‌ಕುಮಾರ್ ಅವರು ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ನಾವು ಹುಟ್ಟಿದಾಗ ನಮಗೆ ಯಾವ ಭಾಷೆಗೆ ಸೇರಿದವರು ಎಂಬ ಅರಿವು ಇರುವುದಿಲ್ಲ. ಬೆಳೆದು ದೊಡ್ಡವರಾದಂತೆ ನಮ್ಮ ಮಾತೃಭಾಷೆ ಕನ್ನಡ ಎಂಬುದು ತಿಳಿಯುತ್ತದೆ. ಆಗ ಮನಸ್ಸಿನಲ್ಲಿ ಒಂದು ರೀತಿಯ ಸಂತೋಷ ಮತ್ತು ಹೆಮ್ಮೆ ಮೂಡುತ್ತದೆ. ಮೂಲತಃ ಕನ್ನಡಿಗನಾಗಿರುವುದೆಂದರೆ ನಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಹೊಂದಿರುವುದೇ ಆಗಿದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಪ್ರತಿಯೊಬ್ಬರಿಗೂ ಅವರದ್ದೇ ಆದ ದೃಷ್ಟಿಕೋನವಿರುತ್ತದೆ. ಪ್ರತಿಯೊಂದು ಸಿನಿಮಾದಲ್ಲೂ ಒಂದೊಂದು ಸಂದೇಶವಿರುತ್ತದೆ. ಅದರಲ್ಲಿ ನಮ್ಮ ಸಮಾಜಕ್ಕೆ ಯಾವುದು ಅಗತ್ಯವೋ ಅದನ್ನು ಸ್ವೀಕರಿಸುವುದು ನಮ್ಮ ಕೈಯಲ್ಲಿದೆ. ಅದೇ ಸಮಯದಲ್ಲಿ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ಕೇವಲ ಸಿನಿಮಾಗಳ ಮೇಲೆಯೇ ಇರುವುದಿಲ್ಲ. ಈ ಒತ್ತಡವನ್ನು ಚಿತ್ರರಂಗದ ಮೇಲೆ ಮಾತ್ರ ಹಾಕಬಾರದು.
ಯಾವುದೇ ಒಂದು ಘಟನೆ ನಡೆದಾಗಲೆಲ್ಲಾ ನಟರು ಏಕೆ ಮಾತನಾಡಲಿಲ್ಲ ಎಂದು ಜನರು ತಕ್ಷಣ ಪ್ರಶ್ನಿಸುತ್ತಾರೆ. ಆದರೆ ಇಂತಹ ನಿರೀಕ್ಷೆಯನ್ನು ಕೇವಲ ನಟರು ಮತ್ತು ಚಿತ್ರರಂಗದ ಮೇಲೆಯೇ ಏಕೆ ಇಡಬೇಕು? ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವ ಪ್ರಯತ್ನ ಎಲ್ಲ ಕಡೆಯಿಂದಲೂ ನಡೆಯಬೇಕು. ಅಂತಿಮವಾಗಿ ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಕೇವಲ ಹೇಳಬೇಕೆಂದು ‘ನಾನು ಕನ್ನಡಿಗ’ ಎಂದು ಹೇಳಬಾರದು. ಬದಲಿಗೆ ನಿಜವಾಗಿಯೂ ಮನಸ್ಸಿನಿಂದ ‘ನಾನು ಕನ್ನಡಿಗ’ ಎಂಬ ಭಾವನೆ ಇರಬೇಕು. ಕರ್ನಾಟಕದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಸಂಸ್ಕೃತಿಯನ್ನು ನಾವು ಸರಿಯಾಗಿ ತಿಳಿದುಕೊಂಡಾಗ ಮಾತ್ರ ಅದರ ಬಗ್ಗೆ ನಿಜವಾದ ಪ್ರೀತಿ ಮೂಡಲು ಸಾಧ್ಯ.ಹಿಂದಿನ ಕಾಲದಲ್ಲಿ ಕನ್ನಡ ಭಾಷೆಯನ್ನು ಹರಡಲು ನಮ್ಮ ಬಳಿ ಸಾಮಾಜಿಕ ಜಾಲತಾಣಗಳಿರಲಿಲ್ಲ. ಆದರೂ ಕನ್ನಡ ಭಾಷೆ ತನ್ನಷ್ಟಕ್ಕೆ ತಾನೇ ಸಹಜವಾಗಿ ಬೆಳೆಯುತ್ತಾ, ಜನರ ನಡುವೆ ಹರಡುತ್ತಿತ್ತು. ಹಲವು ವರ್ಷಗಳಿಂದ ನಟರು, ಸಾಹಿತಿಗಳು ಮತ್ತು ಕವಿಗಳು ಮಾಡಿದ ಕೆಲಸದ ಮೂಲಕ ಕನ್ನಡ ಭಾಷೆ ಇಡೀ ಜಗತ್ತಿಗೆ ಪರಿಚಯವಾಯಿತು ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಹಿಂದಿನ ದಿನಗಳಲ್ಲಿ ಜನರು ಬಹಳ ಸಾಂಪ್ರದಾಯಿಕ ರೀತಿಯಲ್ಲಿ ‘ನಾನು ಕನ್ನಡಿಗ’ ಎಂದು ಹೇಳುತ್ತಿದ್ದರು. ಇಂದಿನವರು ಅದನ್ನೇ ಸ್ವಲ್ಪ ಆಧುನಿಕ ಶೈಲಿಯಲ್ಲಿ ಹೇಳುತ್ತಾರೆ. ಮುಂದಿನ ಪೀಳಿಗೆಯವರು ಇನ್ನೂ ಹೊಸ ರೀತಿಯಲ್ಲಿ, ಹೊಸ ಉಚ್ಚಾರಣೆಯಲ್ಲಿ ಹೇಳಬಹುದು.
ಆದರೆ ಅದನ್ನು ಹೇಗೆ ಉಚ್ಚರಿಸಿದರೂ ಎಲ್ಲವೂ ಒಂದೇ. ಹಿರಿಯ ಪೀಳಿಗೆಯಾಗಿರಲಿ, ಇಂದಿನ ಆಧುನಿಕ ಪೀಳಿಗೆಯಾಗಿರಲಿ ಅಥವಾ ಭವಿಷ್ಯದ ಪೀಳಿಗೆಯಾಗಿರಲಿ, ಪ್ರತಿಯೊಬ್ಬರೂ ಹೆಮ್ಮೆಯಿಂದ ‘ನಾನು ಕನ್ನಡಿಗ’ ಎಂದು ಹೇಳಬೇಕು ಎಂದು ಶಿವರಾಜ್‌ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.