ಮೈಸೂರು: ಸಾಲ ಕೇಳಲು ಬಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ನನಗೆ ಕೋಟೆ ಹುಂಡಿ ಮಹಾದೇವ ಎಂಬ ವ್ಯಕ್ತಿ 55 ಲಕ್ಷ ಹಣ ಸಾಲ ನೀಡಿದ್ದು, ಅದನ್ನು ಕೇಳಲು ಹೋದಾಗ ಹೆಚ್.ವಿಶ್ವನಾಥ್ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಆ ವ್ಯಕ್ತಿ ನನ್ನ ವಿರುದ್ಧ ದೇವರಾಜ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೋಲಿಸರು ನನಗೆ ನೋಟಿಸ್ ಕೊಟ್ಟಿದ್ದರು. ಅದಕ್ಕೆ ಉತ್ತರ ನೀಡಿದ್ದೇನೆ. ಅನಂತರವೂ ನನ್ನ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದರು.
ಈ ಬಗ್ಗೆ ಹೈಕೋರ್ಟ್ಗೆ ಹೋಗುತ್ತೇನೆ. ನಾನು 50 ವರ್ಷ ರಾಜಕಾರಣದಲ್ಲಿ ಸಾಲ ಮಾಡಿಲ್ಲ. ಕೋಟೆ ಹುಂಡಿ ಮಹಾದೇವನಿಗೆ ಎಲ್ಲಿಂದ ಹಣ ಬಂತು? ಈತ ನನ್ನ ಮನೆಯ ಮುಂದೆ ಬಂದು ನಿಲ್ಲುತ್ತಿದ್ದ. ನಾನು ಯತೀಂದ್ರ ಸಿದ್ದರಾಮಯ್ಯ ನನ್ನ ಹೆಚ್ಎಂ ಎಂದು ಹೇಳಿದ್ದೆ, ಅದಕ್ಕೆ ದ್ವೇಷ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ ಅಷ್ಟೇ ಎಂದು ಹೇಳಿದರು.
ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಮಹದೇವಪ್ಪ ಹಾಗೂ ಸಿಎಂ ಮಗ ಬೇರೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಬರೀ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇದೇ ಹೆಸರಿನಲ್ಲಿ ಕೀಟಲೆ ಕೆಲಸ ಮಾತ್ರ ನಡೆಯುತ್ತಿದೆ. ಈಗಾಗಲೇ ಎಫ್‌ಐಆರ್ ವಿರುದ್ಧ ಹೈಕೋರ್ಟ್ಗೆ ಹೋಗಿದ್ದೇನೆ ಎಂದರು.