ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಸೇವಾ ವಿವರಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯ 'ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2.0' (HRMS-2.0) ನಿರ್ದೇಶನಾಲಯವು ಮಹತ್ವದ ಸುತ್ತೋಲೆ ಹೊರಡಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ ಸಿಬ್ಬಂದಿಯ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (e-SR) ಮೂಲಕ ಕಡ್ಡಾಯವಾಗಿ ನವೀಕರಿಸಿ ಪ್ರಕಟಿಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ರಾಜ್ಯದ ವಿವಿಧ ಇಲಾಖೆಗಳು ಈಗಾಗಲೇ ಹೆಚ್‌ಆರ್‌ಎಂಎಸ್-2 ಗೆ ಸೇರ್ಪಡೆಗೊಂಡಿದ್ದರೂ, ನೌಕರರ ಸೇವಾ ವಿವರಗಳನ್ನು ಇನ್ನೂ ಹಳೆಯ ಹೆಚ್‌ಆರ್‌ಎಂಎಸ್-1 ತಂತ್ರಾಂಶದಿಂದಲೇ ಪಡೆಯಲಾಗುತ್ತಿದೆ. ಪ್ರಸ್ತುತ ಅಕ್ಟೋಬರ್ 2026ರ ಅಂತ್ಯದ ವೇಳೆಗೆ ಹೆಚ್‌ಆರ್‌ಎಂಎಸ್-1.0 ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ಇಲಾಖೆಗಳು ತಕ್ಷಣವೇ ನೌಕರರ ಸೇವಾ ವಿವರಗಳನ್ನು ಪರಿಶೀಲಿಸಿ, ಅಗತ್ಯ ತಿದ್ದುಪಡಿ ಹಾಗೂ ಸೇರ್ಪಡೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಸಿ.ಎ.ಜಿ (CAG) ಅವರ ಸಂಪೂರ್ಣ ಕಾಗದ ರಹಿತ ಕಾರ್ಯವಿಧಾನದ ದೃಷ್ಟಿಕೋನಕ್ಕೆ ಅನುಗುಣವಾಗಿ, ರಾಜ್ಯದಲ್ಲಿ ಪಿಂಚಣಿ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೌತಿಕ ದಾಖಲೆಗಳ (Physical Documents) ಚಲನವಲನವನ್ನು ರದ್ದುಪಡಿಸಲಾಗಿದ್ದು, ಏಪ್ರಿಲ್ 1, 2026 ರಿಂದಲೇ ಜಾರಿಗೆ ಬರುವಂತೆ ಎಲ್ಲಾ ಪಿಂಚಣಿ ಪ್ರಸ್ತಾವನೆಗಳನ್ನು ಕೇವಲ ಆನ್‌ಲೈನ್ ಮೂಲಕ ಸಿದ್ಧಪಡಿಸಿದ ಇ-ಎಸ್‌ಆರ್ (e-SR) ದಾಖಲೆಗಳೊಂದಿಗೆ ಮಾತ್ರ ಸಲ್ಲಿಸಲು ಆರ್ಥಿಕ ಇಲಾಖೆ ಸೂಚಿಸಿದೆ.
ಮಾರ್ಚ್ 2026ರ ಒಳಗೆ ಇ-ಎಸ್‌ಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಹಿಂದೆಯೇ ಸೂಚನೆ ನೀಡಲಾಗಿದ್ದರೂ, ಇಲಾಖೆಗಳು ಸಾಧಿಸಿರುವ ಪ್ರಗತಿ ತೃಪ್ತಿಕರವಾಗಿಲ್ಲ ಎಂದು ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕೆಲಸವನ್ನು ನಿಗದಿತ ಸಮಯಕ್ಕೆ ಮುಗಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ನೌಕರರ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ತೊಡಕಾಗಲಿದೆ ಎಂದು ಎಚ್ಚರಿಸಲಾಗಿದೆ.
ಬರುವ ನವೆಂಬರ್ 2026 ರಿಂದ ಹೆಚ್‌ಆರ್‌ಎಂಎಸ್-2.0 ತಂತ್ರಾಂಶದಲ್ಲಿ ವಾರ್ಷಿಕ ವೇತನ ಬಡ್ತಿ (Increment), ಹಿಂಬಡ್ತಿ, ವರ್ಗಾವಣೆ ಹಾಗೂ ಮುಂಬಡ್ತಿ (Promotion) ಸೌಲಭ್ಯಗಳನ್ನು ಕೇವಲ ಇ-ಎಸ್‌ಆರ್ ಪ್ರಕಟವಾಗಿರುವ ನೌಕರರಿಗೆ ಮಾತ್ರ ಒದಗಿಸಲಾಗುತ್ತದೆ. ಹೀಗಾಗಿ ಯಾವುದೇ ಸೇವಾ ಸೌಲಭ್ಯಗಳಿಗೆ ಅಡಚಣೆಯಾಗದಂತೆ, ಎಲ್ಲಾ ನೌಕರರು ಮತ್ತು ಅಧಿಕಾರಿಗಳು ತಮ್ಮ ಇ-ಎಸ್‌ಆರ್ ಅನ್ನು ತುರ್ತಾಗಿ ಪೂರ್ಣಗೊಳಿಸಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗಿದೆ.