ಬೆಂಗಳೂರು : ಮೈಸೂರು ದಸರಾ ದೀಪಾಲಂಕಾರವನ್ನು ವೀಕ್ಷಿಸಲು ಸಾರ್ವಜನಿಕರಿಂದ ಭಾರಿ ಪ್ರಮಾಣದ ಜನದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಒತ್ತಾಸೆಯ ಮೇರೆಗೆ ಲೈಟಿಂಗ್ ಪ್ರದರ್ಶನವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ದಸರಾ ಲೈಟಿಂಗ್ ಅವಧಿಯನ್ನು ಇನ್ನೂ 10 ದಿನಗಳ ಕಾಲ ಮುಂದುವರಿಸುವ ಯೋಜನೆಯಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ವಿಜಯನಗರ ಸಾಮ್ರಾಜ್ಯದಿಂದ ಹಿಡಿದು ಅರಸು ಕಾಲದವರೆಗೆ ಸುದೀರ್ಘ ಇತಿಹಾಸ ಹೊಂದಿರುವ ದಸರಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿದೆ. ಕದ್ರಿ ಮಂಜುನಾಥ ದೇವರಿಗಾಗಿ ಆರಂಭವಾದ ಕಂಬಳ ಕ್ರೀಡೆಗೆ ವಿಜಯನಗರ ಕಾಲದಿಂದಲೂ ಕೋಣಗಳಿಗೆ ಗೌರವ ನೀಡುವ ಪದ್ಧತಿಯಿದೆ. ಹಿಂದೆ ಚಾಮುಂಡಿಗೆ ಒಡೆಯುತ್ತಿದ್ದ ತೆಂಗಿನಕಾಯಿಯನ್ನೇ ಕಂಬಳದ ಬಹುಮಾನವಾಗಿ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಗುತ್ತಿದ್ದು, ಅವುಗಳನ್ನು ರೈತರು ಮದುವೆಗೆ ದಾನವಾಗಿ ನೀಡುವ ಮೂಲಕ ಗೌರವಯುತವಾಗಿ ಕಾಪಾಡಿಕೊಂಡು ಬರುತ್ತಾರೆ ಎಂದು ಸಿಎಂ ವಿವರಿಸಿದ್ದಾರೆ. ಕೋಣಗಳನ್ನು ತಮ್ಮ ಮಕ್ಕಳಂತೆ ಪೋಷಿಸಲು ರೈತರು 15 ರಿಂದ 20 ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡುತ್ತಿದ್ದಾರೆ ಎಂದರು.
ಇನ್ನು ದಸರಾ ಉತ್ಸವವನ್ನು ಕೇವಲ ಮೈಸೂರಿಗೆ ಮಾತ್ರ ಸೀಮಿತಗೊಳಿಸದೆ, ತುಳುನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕೊಡಗು ಸೇರಿದಂತೆ ರಾಜ್ಯದ ಎಲ್ಲೆಡೆ ವಿಸ್ತರಿಸಲಾಗಿದೆ. ದಸರಾದಲ್ಲಿ ಯುವ ದಸರಾ ಮೂಲಕ ಹೊರರಾಜ್ಯದವರನ್ನು ಸೆಳೆದು ಯುವಕರಿಗೆ ಮನೋರಂಜನೆ ನೀಡುವುದರ ಜೊತೆಗೆ, ಹೊಸದಾಗಿ ಏರ್ ಶೋ (Air Show) ಆರಂಭಿಸುವ ಮೂಲಕ ಹೊಸ ಪರಂಪರೆಗೆ ಮುನ್ನುಡಿ ಬರೆಯಲಾಗಿದೆ. ನಮ್ಮ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.