ಮೊಬೈಲ್‌ನಲ್ಲಿ ಒಂದೇ ಕ್ಲಿಕ್ ಮಾಡಿದರೆ ಸಾಕು, ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಹಾಲು, ಪನೀರ್, ಸಿಹಿತಿಂಡಿ, ದಿನಸಿ ಸಾಮಗ್ರಿಗಳು ಬಂದು ತಲುಪುತ್ತವೆ. ಅದರಲ್ಲೂ ಬ್ಲಿಂಕಿಟ್, ಜೆಪ್ಟೋ ಸೇರಿದಂತೆ ಕ್ವಿಕ್ ಕಾಮರ್ಸ್ ಆ್ಯಪ್‌ಗಳು ಜನರ ದಿನನಿತ್ಯದ ಬದುಕಿನ ಭಾಗವಾಗಿವೆ. ಆದರೆ ನಾವು ಇಷ್ಟೊಂದು ನಂಬಿಕೆಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಆಹಾರ ಪದಾರ್ಥಗಳು ನಿಜಕ್ಕೂ ಸುರಕ್ಷಿತವೇ? ಎಂಬ ಪ್ರಶ್ನೆ ಈಗ ಎದುರಾಗಿದೆ.
ಇದಕ್ಕೆ ಕಾರಣ ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ನಡೆಸಿರುವ ವಿಶೇಷ ಕಾರ್ಯಾಚರಣೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಬ್ಲಿಂಕಿಟ್, ಜೆಪ್ಟೋ ಸೇರಿದಂತೆ ಒಟ್ಟು 105 ಆಹಾರ ವ್ಯವಹಾರ ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ. ಗಂಭೀರ ಲೋಪಗಳು ಕಂಡುಬಂದ ಮತ್ತೊಂದು ಏಳು ಸಂಸ್ಥೆಗಳಿಗೆ ತಕ್ಷಣವೇ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.
₹1.35 ಕೋಟಿ ಮೌಲ್ಯದ ಆಹಾರ ಪದಾರ್ಥಗಳಲ್ಲಿ ಏನಿತ್ತು ಗೊತ್ತಾ?
ನವೆಂಬರ್ 4 ಮತ್ತು 5ರಂದು ಮಹಾರಾಷ್ಟ್ರದಾದ್ಯಂತ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಿದ್ದಾರೆ. ಈ ವೇಳೆ 70ಕ್ಕೂ ಹೆಚ್ಚು ಸಂಸ್ಥೆಗಳಿಂದ ಬರೋಬ್ಬರಿ ₹1.35 ಕೋಟಿ ಮೌಲ್ಯದ 39,485 ಕೆಜಿಗೂ ಅಧಿಕ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.
ಜಪ್ತಿಯಾದ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ನಾವು ಪ್ರತಿದಿನ ಬಳಸುವ ಕೋವಾ, ಮಾವಾ, ಪನೀರ್, ತುಪ್ಪ, ಅಡುಗೆ ಎಣ್ಣೆ, ಫರ್ಸಾನ್, ಗೋಡಂಬಿ, ಬಾದಾಮಿ ಹಾಗೂ ವಿವಿಧ ಬಗೆಯ ಸಿಹಿತಿಂಡಿಗಳೂ ಇವೆ.
ಪುಣೆಯಲ್ಲಿ ಅತಿ ಹೆಚ್ಚು ಆಹಾರ ಪದಾರ್ಥ ಜಪ್ತಿ
ಈ ಕಾರ್ಯಾಚರಣೆಯಲ್ಲಿ ಪುಣೆ ವಿಭಾಗದಲ್ಲಿ ಅತಿ ಹೆಚ್ಚು ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ₹49.36 ಲಕ್ಷ ಮೌಲ್ಯದ 14.4 ಟನ್ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಕೊಂಕಣ ವಿಭಾಗದಲ್ಲಿ ₹32.52 ಲಕ್ಷ ಹಾಗೂ ನಾಸಿಕ್ ವಿಭಾಗದಲ್ಲಿ ₹28.35 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
105 ಸಂಸ್ಥೆಗಳ ವಿರುದ್ಧ ಕ್ರಮ: ಎಲ್ಲೆಲ್ಲಿ ಎಷ್ಟು?
-
ನಾಸಿಕ್ – 39 ಸಂಸ್ಥೆಗಳು
-
ಮುಂಬೈ – 28 ಸಂಸ್ಥೆಗಳು
-
ಪುಣೆ – 20 ಸಂಸ್ಥೆಗಳು
-
ಅಮರಾವತಿ – 15 ಸಂಸ್ಥೆಗಳು
-
ಛತ್ರಪತಿ ಸಂಭಾಜಿನಗರ – 2 ಸಂಸ್ಥೆಗಳು
-
ಥಾಣೆ – 1 ಸಂಸ್ಥೆ
ಆಹಾರ ಸಂಗ್ರಹಣೆಯಲ್ಲಿ ಇಷ್ಟೊಂದು ನಿರ್ಲಕ್ಷ್ಯವೇ?
ತಪಾಸಣೆ ವೇಳೆ ಕೆಲವು ಉತ್ಪಾದನಾ ಘಟಕಗಳು ಮತ್ತು ಗೋದಾಮುಗಳಲ್ಲಿ ಅತ್ಯಂತ ಅಶುಚಿಯಾದ ವಾತಾವರಣ ಕಂಡುಬಂದಿದೆ. ಆಹಾರ ಪದಾರ್ಥಗಳ ಸಂಗ್ರಹಣೆ, ಪ್ಯಾಕಿಂಗ್ ಹಾಗೂ ಕೀಟ ನಿಯಂತ್ರಣದಲ್ಲಿ ನಿರ್ಲಕ್ಷ್ಯ ತೋರಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಅಷ್ಟೇ ಅಲ್ಲದೆ, ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅಗತ್ಯವಾದ ತಾಪಮಾನ ನಿಯಂತ್ರಣ ವ್ಯವಸ್ಥೆ, ಕಡ್ಡಾಯ ದಾಖಲೆಗಳು ಮತ್ತು ಗುಣಮಟ್ಟದ ಪ್ರಮಾಣಪತ್ರಗಳ ಕೊರತೆಯೂ ಪತ್ತೆಯಾಗಿದೆ.
ಗುಟ್ಕಾ ಮಾರಾಟದ ಮೇಲೂ ಬಿತ್ತು ಬಿಸಿ
ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಜೊತೆಗೆ ನಿಷೇಧಿತ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ವಿರುದ್ಧವೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮೂರು ಸ್ಥಳಗಳಿಂದ ₹7.96 ಲಕ್ಷ ಮೌಲ್ಯದ ನಿಷೇಧಿತ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ಎರಡು ವಾಹನಗಳನ್ನು ವಶಪಡಿಸಿಕೊಂಡು ಎರಡು ಅಂಗಡಿಗಳಿಗೆ ಬೀಗ ಹಾಕಲಾಗಿದೆ.
ಗ್ರಾಹಕರೇ, ಆಹಾರ ಖರೀದಿಸುವಾಗ ಎಚ್ಚರ!
ಆನ್‌ಲೈನ್ ಆ್ಯಪ್ ಆಗಿರಲಿ ಅಥವಾ ಸ್ಥಳೀಯ ಅಂಗಡಿಯಾಗಿರಲಿ, ಆಹಾರ ಪದಾರ್ಥಗಳನ್ನು ಖರೀದಿಸುವಾಗ ಅವುಗಳ ಗುಣಮಟ್ಟ, ಪ್ಯಾಕಿಂಗ್, ಉತ್ಪಾದನಾ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲಿಸುವುದು ಅತ್ಯಗತ್ಯ. ಕಡಿಮೆ ಸಮಯದಲ್ಲಿ ಮನೆಗೆ ಆಹಾರ ತಲುಪಿಸುವುದಕ್ಕಿಂತ ಅದು ಸುರಕ್ಷಿತವಾಗಿದೆಯೇ ಎಂಬುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.