ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಡೀ ದೇಶವೇ ಕಣ್ಣೀರು ಹಾಕುವಂತಹ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಹೋಟೆಲ್‌ನಲ್ಲಿ ಕುಟುಂಬಸ್ಥರೊಂದಿಗೆ ಸಂತೋಷದಿಂದ ಊಟ ಮುಗಿಸಿ, ಮಕ್ಕಳೊಂದಿಗೆ ನಗುನಗುತ್ತಾ ಆಟವಾಡುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ನೆಲಕ್ಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಈ ದುರಂತ ಸ್ಥಳೀಯವಾಗಿ ತೀವ್ರ ದಿಗ್ಭ್ರಮೆ ಮತ್ತು ವಿಷಾದವನ್ನು ಉಂಟುಮಾಡಿದೆ.
ಗುಜರಾತ್‌ನ ಜಾಮ್‌ನಗರ ಮೂಲದ ನಿವಾಸಿ ಆನಂದಿ ಮೋದಿ (14) ಮೃತಪಟ್ಟ ದುರ್ದೈವಿ ಬಾಲಕಿ. ಶಾಲೆಗಳಿಗೆ ಬೇಸಿಗೆ ರಜೆ ಇದ್ದ ಕಾರಣ, ಆನಂದಿ ರಾಜ್‌ಕೋಟ್‌ನಲ್ಲಿರುವ ತನ್ನ ಮಾವನ ಮನೆಗೆ ರಜೆ ಕಳೆಯಲು ಅತ್ಯಂತ ಖುಷಿಯಿಂದ ಬಂದಿದ್ದಳು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.
ಭಾನುವಾರ ಸಂಜೆ ಆನಂದಿ ಹಾಗೂ ಆಕೆಯ ಕುಟುಂಬಸ್ಥರು ರಾಜ್‌ಕೋಟ್‌ನ ಹೋಟೆಲೊಂದಕ್ಕೆ ರಾತ್ರಿಯ ಭೋಜನಕ್ಕಾಗಿ ತೆರಳಿದ್ದರು. ಎಲ್ಲರೂ ಒಟ್ಟಾಗಿ ಊಟ ಮುಗಿಸಿದ ಬಳಿಕ, ಹೋಟೆಲ್ ಆವರಣದಲ್ಲಿ ಆನಂದಿ ತನ್ನ ಕುಟುಂಬದ ಇತರ ಮಕ್ಕಳೊಂದಿಗೆ ಅತ್ಯಂತ ಉತ್ಸಾಹದಿಂದ ಆಟವಾಡಲು ಪ್ರಾರಂಭಿಸಿದ್ದಾಳೆ. ಆದರೆ, ಆಟದ ಮೂಡ್‌ನಲ್ಲಿದ್ದ ಬಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಜಾರಿ ಬಿದ್ದಿದ್ದಾಳೆ.
ಬಾಲಕಿ ದಿಢೀರನೆ ನೆಲಕ್ಕೆ ಬಿದ್ದಿದ್ದನ್ನು ಕಂಡು ಆತಂಕಗೊಂಡ ಕುಟುಂಬಸ್ಥರು ಮತ್ತು ಹೋಟೆಲ್ ಸಿಬ್ಬಂದಿ ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಬಾಲಕಿಯ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ವೈದ್ಯರು ತಕ್ಷಣವೇ ಚಿಕಿತ್ಸೆ ಆರಂಭಿಸಿದರಾದರೂ, ಯಾವುದೇ ಫಲಪ್ರದವಾಗದೆ ಆ ಪುಟ್ಟ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ರಜೆ ಕಳೆಯಲು ಬಂದ ಮಗಳು ಹೆಣವಾಗಿ ಬದಲಾಗಿದ್ದನ್ನು ಕಂಡು ಹೆತ್ತ ಕರುಳು ಆಕ್ರಂದನ ಮುಗಿಲು ಮುಟ್ಟಿದೆ.
ಮಕ್ಕಳಿಗೂ ಕಾಡುತ್ತಿದೆಯೇ ಹೃದಯಾಘಾತ?
ವೈದ್ಯರ ಪ್ರಾಥಮಿಕ ವರದಿಗಳ ಪ್ರಕಾರ, ಇಷ್ಟು ಚಿಕ್ಕ ವಯಸ್ಸಿನ ಬಾಲಕಿಯ ದಿಢೀರ್ ಸಾವಿಗೆ ಹೃದಯಾಘಾತ (Heart Attack) ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಲ್ಲೂ ಇಂತಹ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಪೋಷಕರಲ್ಲಿ ಭಾರಿ ಕಳವಳ ಮೂಡಿಸಿದೆ. ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ.