ಮಹಾಬಲಿಪುರಂ: ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಳ ಮಾಡಬಾರದು, 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಎಂಬುದು ನಮ್ಮ ಸಭೆಯ ಪ್ರಮುಖ ಅಜೆಂಡಾ ಆಗಿತ್ತು. ಈ ವಿಚಾರದಲ್ಲಿ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ರಾಜ್ಯಗಳು ಒಮ್ಮತದ ತೀರ್ಮಾನಕ್ಕೆ ಮುಂದಾಗಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆ ಬಳಿಕ ಮಾಧ್ಯಮಗಳಿಗೆ ಸಿಎಂ.ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಇದರ ಜೊತೆಗೆ ನೀರು ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ಕರೆದು ಸೂಕ್ತ ರೀತಿಯಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ. ಗೃಹಸಚಿವರ ಸಮ್ಮುಖದಲ್ಲಿ ನಾನು ಮೇಕೆದಾಟು ಯೋಜನೆಯಡಿ ಸಂಗ್ರಹವಾಗುವ ಒಂದೇ ಒಂದು ಹನಿ ನೀರನ್ನು ನೀರಾವರಿಗೆ ಬಳಸುವುದಿಲ್ಲ ಎಂದು ತಮಿಳುನಾಡಿಗೆ ಸ್ಪಷ್ಟಪಡಿಸಿದ್ದೇನೆ. ಕುಡಿಯಲು 5 ಟಿಎಂಸಿ ನೀರು ಬಳಸುವುದು ಬಿಟ್ಟರೆ ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಾಗುವುದು. ಮೇಕೆದಾಟು ಯೋಜನೆಯಿಂದ ತಮಿಳುನಾಡು ಹಾಗೂ ಪಾಂಡಿಚೇರಿ ಪಾಲಿನ ನೀರು ನೀಡಲು ಸಾಧ್ಯ. ಈ ಅಣೆಕಟ್ಟು ನಿರ್ಮಾಣವಾಗುತ್ತಿರುವುದೇ ನಿಮಗಾಗಿ ಎಂದು ಹೇಳಿರುವೆ ಎಂದು ತಿಳಿಸಿದರು.