ನವದೆಹಲಿ: ದೇಶದ ಅಂಚೆ ಕಚೇರಿಗಳ ಸೇವೆಗಳಿಗೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶದವರೆಗೆ ಅಂಚೆ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ಬರೋಬ್ಬರಿ ₹2,632 ಕೋಟಿ ಮೊತ್ತದ ಎರಡು ಯೋಜನೆಗಳಿಗೆ ಅನುಮೋದನೆ ನೀಡಿದೆ.
ಬುಧವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಅಂಚೆ ಕಚೇರಿಗಳ ಆಧುನೀಕರಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ಈ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ. ಈ ಕುರಿತು ಕೇಂದ್ರ ರೈಲ್ವೆ ಮತ್ತು ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಎರಡು ಯೋಜನೆಗಳಿಗೆ ಅನುಮೋದನೆ
ಅಂಚೆ ಇಲಾಖೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಎರಡು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಿದೆ.ಅಂಚೆ ಕಾರ್ಯಾಚರಣೆ ಯೋಜನೆ: ₹1,141 ಕೋಟಿ ಹಾಗೂ ಅಂಚೆ ಇಲಾಖೆಯ ಆಸ್ತಿ ನಿರ್ವಹಣಾ ಯೋಜನೆ: ₹1,491 ಕೋಟಿ.ಈ ಯೋಜನೆಗಳು 2026-27ರಿಂದ 2030-31ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳ್ಳಲಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿಗಳೇ ಉದ್ಯಮ ಕೇಂದ್ರ!
ಗ್ರಾಮೀಣ ಪ್ರದೇಶಗಳಲ್ಲಿರುವ ಅಂಚೆ ಕಚೇರಿಗಳನ್ನು ಕೇವಲ ಪತ್ರಗಳ ವಿತರಣಾ ಕೇಂದ್ರಗಳಾಗಿ ಉಳಿಸದೆ, ಗ್ರಾಮೀಣ ಉದ್ಯಮ ಮತ್ತು ಸೇವಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಉದ್ದೇಶಿಸಿದೆ.ಇಲ್ಲಿ ಬ್ಯಾಂಕಿಂಗ್ ಸೇವೆಗಳು, ರೈಲು ಟಿಕೆಟ್ ಬುಕಿಂಗ್, ವಿಮೆ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದರ ಜೊತೆಗೆ ಪಾರ್ಸೆಲ್ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದಕ್ಕೂ ಆದ್ಯತೆ ನೀಡಲಾಗುತ್ತದೆ.
ದೇಶಾದ್ಯಂತ ಸುಮಾರು 1.65 ಲಕ್ಷ ಅಂಚೆ ಕಚೇರಿಗಳಿದ್ದು, ಇವುಗಳಲ್ಲಿ 1,49,385 ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಹೀಗಾಗಿ ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.
₹11,000 ಕೋಟಿ ಮೌಲ್ಯದ ಮತ್ತೊಂದು ಯೋಜನೆ
ಇದೇ ವೇಳೆ ದೇಶದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನಾ ವಲಯವನ್ನು ಉತ್ತೇಜಿಸಲು ₹11,000 ಕೋಟಿ ಮೊತ್ತದ ಯೋಜನೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಈ ಯೋಜನೆಯು 2026-27ರಿಂದ ಎಂಟು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ. ಸುರಂಗ ಕೊರೆಯುವ ಯಂತ್ರಗಳು, ಅಗೆಯುವ ಯಂತ್ರಗಳು, ಕ್ರೇನ್‌ಗಳು, ಲೋಡರ್‌ಗಳು ಸೇರಿದಂತೆ ಪ್ರಮುಖ ಉಪಕರಣಗಳ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ.
ತಮಿಳುನಾಡಿನಲ್ಲಿ ಹೊಸ ಕಂಟೈನರ್ ಟರ್ಮಿನಲ್
ತಮಿಳುನಾಡಿನ ಕಾಮರಾಜರ್ ಬಂದರಿನಲ್ಲಿ ಎರಡನೇ ಕಂಟೈನರ್ ಟರ್ಮಿನಲ್ ಅಭಿವೃದ್ಧಿಪಡಿಸಲು ₹4,288.26 ಕೋಟಿ ವೆಚ್ಚದ ಯೋಜನೆಗೂ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಈ ಯೋಜನೆ ಜಾರಿಯಾಗಲಿದೆ.
ಅಸ್ಸಾಂನಲ್ಲಿ ಹೊಸ ವಿಮಾನ ನಿಲ್ದಾಣ
ಅಸ್ಸಾಂನ ಸಿಲ್ಚಾರ್‌ನಲ್ಲಿ ₹2,014 ಕೋಟಿ ಅಂದಾಜು ವೆಚ್ಚದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಡೂಲು ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ವಿಮಾನ ನಿಲ್ದಾಣದಿಂದ ಈಗಿರುವ ಸಿಲ್ಚಾರ್ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ, ಅಂಚೆ ಸೇವೆಗಳ ಆಧುನೀಕರಣದಿಂದ ಹಿಡಿದು ಕೈಗಾರಿಕೆ, ಬಂದರು ಮತ್ತು ವಿಮಾನಯಾನ ಕ್ಷೇತ್ರಗಳ ಅಭಿವೃದ್ಧಿವರೆಗೆ ಹಲವು ಮಹತ್ವದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.