ರೈಲ್ವೆ ಟಿಕೆಟ್ ಕೌಂಟರ್‌ಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ದಿನಗಳು ನಿಧಾನವಾಗಿ ಕಡಿಮೆಯಾಗುತ್ತಿವೆ. ಮೊಬೈಲ್ ಆ್ಯಪ್, ಡಿಜಿಟಲ್ ಪ್ಲಾಟ್‌ಫಾರ್ಮ್ ಹಾಗೂ ಸ್ವಯಂಚಾಲಿತ ಟಿಕೆಟ್ ಯಂತ್ರಗಳ ಮೂಲಕವೇ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಖರೀದಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಾರ್ತಿಕ ಪೂರ್ಣಿಮೆಯ ಸಂದರ್ಭದಲ್ಲಿ ಬಿಹಾರದ ಸೋನೆಪುರದಲ್ಲಿ ಕೇವಲ ಎರಡು ದಿನಗಳಲ್ಲಿ 43,207 ಪ್ರಯಾಣಿಕರು ಡಿಜಿಟಲ್ ಟಿಕೆಟ್ ವ್ಯವಸ್ಥೆ ಬಳಸಿದ್ದಾರೆ. ಈ ಮೂಲಕ ಭಾರತೀಯ ರೈಲ್ವೆಗೆ ಬರೋಬ್ಬರಿ ₹20.73 ಲಕ್ಷ ಆದಾಯ ಬಂದಿದೆ. ಹಾಗಾದರೆ ಯಾವ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಎಷ್ಟು ಮಂದಿ ಬಳಸಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಕಾರ್ತಿಕ ಪೂರ್ಣಿಮೆಯ ಅಂಗವಾಗಿ ಗಂಗಾ ಮತ್ತು ಗಂಡಕ್ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಲಕ್ಷಾಂತರ ಭಕ್ತರು ಬಿಹಾರದ ಸೋನೆಪುರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಸಾಮಾನ್ಯ ಟಿಕೆಟ್ ಕೌಂಟರ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳನ್ನು ತಪ್ಪಿಸಲು ರೈಲ್ವೆ ಇಲಾಖೆ ಒದಗಿಸಿದ್ದ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಸಾವಿರಾರು ಪ್ರಯಾಣಿಕರು ಬಳಸಿಕೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋನೆಪುರ ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕ (DRM) ಅಮಿತ್ ಸರಣ್ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಪಡೆಯಲು ಅನ್‌ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (UTS), ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳು (ATVMs) ಮತ್ತು ಮೊಬೈಲ್ UTS (m-UTS) ವ್ಯವಸ್ಥೆಗಳು ನೆರವಾಗಿವೆ. ಇದರಿಂದ ರೈಲ್ವೆ ಇಲಾಖೆಗೆ ಗಣನೀಯ ಆದಾಯವೂ ಬಂದಿದೆ ಎಂದು ಹೇಳಿದ್ದಾರೆ.
ಎರಡು ದಿನಗಳಲ್ಲಿ 43,207 ಪ್ರಯಾಣಿಕರಿಂದ ಡಿಜಿಟಲ್ ಟಿಕೆಟ್ ಖರೀದಿ
ನವೆಂಬರ್ 24 ಮತ್ತು 25ರಂದು ಒಟ್ಟು 43,207 ಪ್ರಯಾಣಿಕರು ಡಿಜಿಟಲ್ ಟಿಕೆಟ್ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ರೈಲ್ವೆ ಇಲಾಖೆಗೆ ₹20.73 ಲಕ್ಷ ಆದಾಯ ಸಂಗ್ರಹವಾಗಿದೆ.
-
UTS ಡಿಜಿಟಲ್ ಪ್ಲಾಟ್‌ಫಾರ್ಮ್: 32,422 ಪ್ರಯಾಣಿಕರು ಟಿಕೆಟ್ ಖರೀದಿಸಿದ್ದು, ₹15.50 ಲಕ್ಷ ಆದಾಯ ಬಂದಿದೆ.
-
ಮೊಬೈಲ್ UTS (m-UTS): 1,270 ಪ್ರಯಾಣಿಕರು ಸೇವೆ ಬಳಸಿದ್ದು, ₹54,460 ಆದಾಯ ಸಂಗ್ರಹವಾಗಿದೆ.
-
ATVM ಯಂತ್ರಗಳು: 9,515 ಪ್ರಯಾಣಿಕರು ಟಿಕೆಟ್ ಖರೀದಿಸಿದ್ದು, ₹4.68 ಲಕ್ಷ ಆದಾಯ ಬಂದಿದೆ.
ಹಬ್ಬದ ಜನಸಂದಣಿಯಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆ ನೆರವು
ಕಾರ್ತಿಕ ಪೂರ್ಣಿಮೆಯ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಮತ್ತು ಪುಣ್ಯಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೋನೆಪುರ ಹಾಗೂ ಸುತ್ತಮುತ್ತಲಿನ ರೈಲು ನಿಲ್ದಾಣಗಳಿಗೆ ಪ್ರಯಾಣಿಸಿದ್ದರು.
ಈ ಸಂದರ್ಭದಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆಯು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ. ಜನದಟ್ಟಣೆಯ ಸಮಯದಲ್ಲಿ ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಪ್ರಯಾಣಿಕರು ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಈ ಅಂಕಿಅಂಶಗಳು ತೋರಿಸುತ್ತವೆ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಮಿತ್ ಸರಣ್ ತಿಳಿಸಿದ್ದಾರೆ.