ಬೆಂಗಳೂರು : ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ಹಾಗೂ ಜನಪ್ರಿಯ ನಟ ಕೀರ್ತಿ ಶಂಕರಘಟ್ಟ (ಕಿರಿಕ್ ಕೀರ್ತಿ) ತಮಗಾದ ಭೀಕರ ಅಪಘಾತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಹೊಸ ವರ್ಷದಿಂದ ಹೊಸ ಬದುಕು ಆರಂಭಿಸಬೇಕೆಂದುಕೊಂಡಿದ್ದ ಅವರಿಗೆ ಈ ಅನಿರೀಕ್ಷಿತ ಅಪಘಾತ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಅಪಘಾತ ಎಲ್ಲಿ ಮತ್ತು ಹೇಗೆ ಸಂಭವಿಸಿತು ಎಂಬ ಬಗ್ಗೆ ಯಾವುದೇ ವಿವರಣೆ ನೀಡದಿದ್ದರೂ, ಈ ದುರ್ಘಟನೆಯಿಂದಾಗಿ ಸುಮಾರು 4 ರಿಂದ 5 ತಿಂಗಳ ಕಾಲ ಸಂಪೂರ್ಣವಾಗಿ ಹಾಸಿಗೆ ಹಿಡಿಯುವಂತಾಯಿತು ಎಂದು ಕೀರ್ತಿ ತಿಳಿಸಿದ್ದಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ನೊಂದಿದ್ದ ಅವರು, ಮನೆಯಲ್ಲೇ ಉಳಿದುಕೊಳ್ಳಬೇಕಾಗಿ ಬಂದಿದ್ದರಿಂದ ತಮ್ಮಲ್ಲಿದ್ದ ಆತ್ಮವಿಶ್ವಾಸವೂ ಸಂಪೂರ್ಣವಾಗಿ ಕುಸಿದಿತ್ತು ಎಂದು ನೋವು ತೋಡಿಕೊಂಡಿದ್ದಾರೆ.
ಅಪಘಾತ ಮತ್ತು ನಿರಂತರ ವಿಶ್ರಾಂತಿಯಿಂದಾಗಿ ನಟ ಕೀರ್ತಿ ಅವರ ದೇಹದ ತೂಕ ತೀವ್ರವಾಗಿ ಕುಸಿದು ಕೇವಲ 55 ಕೆಜಿಗೆ ಇಳಿದಿತ್ತು. ಆದರೂ ಧೃತಿಗೆಡದೆ ಪ್ರಯತ್ನ ಮುಂದುವರಿಸಿದ ಅವರಿಗೆ ದೇವರ ಕೃಪೆ ಹಾಗೂ ಆಪ್ತರ ಬೆಂಬಲ ದೊರೆತಿದೆ. ಸದ್ಯ ದೇವರ ಆಶೀರ್ವಾದದಿಂದ ಅವರ ತೂಕ ಮತ್ತೆ 60 ಕೆಜಿ ದಾಟಿ ಚೇತರಿಕೆಯ ಹಾದಿಯಲ್ಲಿದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಕಳೆದ ಒಂದೆರಡು ವಾರಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಕೀರ್ತಿ, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. "ದೇವರು ಮತ್ತು ದೇವರಂತಿರುವ ಕೆಲವರು ಕೈಹಿಡಿದು ಮೇಲೆತ್ತಿದ್ದಾರೆ, ಸಾಗಬೇಕಾದ ದಾರಿ ತುಂಬಾ ಇದೆ" ಎಂದು ಮನದಾಳದ ಮಾತುಗಳನ್ನು ಆಡಿರುವ ಅವರಿಗೆ, ಅಭಿಮಾನಿಗಳು ಹಾಗೂ ನೆಟ್ಟಿಗರು ಕಮೆಂಟ್‌ಗಳ ಮೂಲಕ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸುತ್ತಿದ್ದಾರೆ.