ನಿನ್ನೆ ( ಮೇ 19 ) ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ ತನ್ನ ಪ್ಲೇಆಫ್ ಪ್ರವೇಶಿಸಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಮಿಚೆಲ್ ಮಾರ್ಷ್ ಹಾಗೂ ಜೋಶ್ ಇಂಗ್ಲಿಸ್ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 221 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್, ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಜವಾಬ್ದಾರಿಯುತ ಆಟದ ನೆರವಿನಿಂದ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿತು.
ಲಕ್ನೋ ಸೂಪರ್ ಜೈಂಟ್ಸ್ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ವೈಭವ್ ಸೂರ್ಯವಂಶಿ ನಿನ್ನೆ ಆರಂಭದಲ್ಲಿ ನಿಧಾನಗತಿಯ ಜವಾಬ್ದಾರಿಯುತ ಆಟವನ್ನಾಡಿ ಬಳಿಕ ಅಬ್ಬರಿಸಿ ಬೊಬ್ಬಿರಿದು ಬೌಂಡರಿಗಳ ಸುರಿಮಳೆಗೈದರು. 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 93 ರನ್ ಬಾರಿಸಿ ಶತಕ ಮಿಸ್ ಮಾಡಿಕೊಂಡ ವೈಭವ್ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಹೀಗೆ ಗೆಲುವಿನ ರೂವಾರಿ ಸ್ಥಾನ ಪಡೆದ ವೈಭವ್ ಸೂರ್ಯವಂಶಿ ಶತಕ ವಂಚಿತರಾದರೂ ಸಹ ಅರ್ಧಶತಕ ಸಿಡಿಸಿದಾಗ ವಿಶೇಷ ಸಂಭ್ರಮಾಚರಣೆ ಮಾಡಿ ಎಲ್ಲರ ಗಮನ ಸೆಳೆದರು. ಅರ್ಧಶತಕದ ಬಳಿಕ ತಮ್ಮ ತಂಡದತ್ತ ಮುಖ ಮಾಡಿ ಕೈನಲ್ಲಿ ‘ಎ’ ಎಂದು ತೋರಿಸಿ ಅರ್ಧಶತಕವನ್ನು ಸಂಭ್ರಮಿಸಿದರು.
ವೈಭವ್ ಸೂರ್ಯವಂಶಿ ಈ ರೀತಿ ವಿಭಿನ್ನವಾಗಿ ಸಂಭ್ರಮಾಚರಣೆ ಮಾಡುತ್ತಿದ್ದಂತೆ ಅದನ್ನು ಡಿಕೋಡ್ ಮಾಡಲು ಮುಂದಾದ ಮಂದಿ ಹಲವು ಕಾರಣಗಳನ್ನು ನೀಡಿ ಇದೇ ಇದರ ಹಿಂದಿನ ಉದ್ದೇಶ ಎಂದರು.
ಕೆಲವರು ವೈಭವ್ ಸೂರ್ಯವಂಶಿ ಅವರ ತಾಯಿಯ ಹೆಸರು ಆರತಿ ಸೂರ್ಯವಂಶಿ ಆಗಿದ್ದು, ಇದೇ ಕಾರಣಕ್ಕೆ ವೈಭವ್ ‘ಎ’ ಸಿಂಬಲ್ ತೋರಿಸಿ ಆತನ ತಾಯಿಗೆ ಅರ್ಧಶತಕ ಅರ್ಪಿಸಿದ ಎಂದರೆ, ಇನ್ನೂ ಕೆಲವರು ವೈಭವ್ ಸೂರ್ಯವಂಶಿ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಅದಿತಿ ಎಂಬ ಯುವತಿಯನ್ನು ಫಾಲೋ ಮಾಡುತ್ತಿದ್ದು, ಆಕೆಗೆ ಈ ಅರ್ಧಶತಕವನ್ನು ಅರ್ಪಿಸಿದ್ದಾನೆ, ಆಕೆ ಆತನ ಗರ್ಲ್‌ಫ್ರೆಂಡ್ ಇರಬಹುದು ಎಂದಿದ್ದಾರೆ. ಜತೆಗೆ ಇದಕ್ಕೆ ಸಂಬಂಧಪಟ್ಟ ವಿಡಿಯೊ ಸಹ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಆದರೆ ಪಂದ್ಯ ಮುಗಿದ ಬಳಿಕ ತಾನು ಮಾಡಿದ ಸೆಲೆಬ್ರೇಷನ್ ಬಗ್ಗೆ ವೈಭವ್ ಸೂರ್ಯವಂಶಿಯನ್ನು ಕೇಳಿದರೆ ಅದರ ಹಿಂದೆ ಯಾವ ಕಾರಣವೂ ಇಲ್ಲ, ಪ್ರತಿ ಬಾರಿ ತಾನು ಅರ್ಧಶತಕ ಅಥವಾ ಶತಕ ಬಾರಿಸಿದಾಗ ವಿಭಿನ್ನ ಸಂಭ್ರಮಾಚರಣೆ ಮಾಡುತ್ತೇನೆ, ಅದರ ಹಿಂದೆ ನಿರ್ದಿಷ್ಟ ಕಾರಣವೇನಿಲ್ಲ ಎಂದಿದ್ದಾರೆ. ಈ ಮೂಲಕ 15 ವರ್ಷದ ವೈಭವ್‌ಗೆ ಗರ್ಲ್‌ಫ್ರೆಂಡ್ ಇದ್ದಾರೆ ಎಂಬ ವಿವಾದವನ್ನು ವೈಭವ್ ತಳ್ಳಿಹಾಕಿದ್ದಾರೆ.
Vaibhav Suryavanshi celebration Is decoded 

(@Abhinav_hariom)