ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ತಡೆಯಲು ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (AI) ಕ್ಯಾಮೆರಾಗಳು ಒಂದಾದ ಮೇಲೊಂದರಂತೆ ಹಾಸ್ಯಾಸ್ಪದ ಎಡವಟ್ಟುಗಳನ್ನು ಮಾಡುತ್ತಿವೆ. ಬಿಎಂಟಿಸಿ ಚಾಲಕರು ಚಾಲನಾ ವೇಳೆ ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ವಿಚಿತ್ರ ಕಾರಣ ನೀಡಿ AI ಕ್ಯಾಮೆರಾಗಳು ಬಸ್ಗಳಿಗೆ ದಂಡ ವಿಧಿಸಿವೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬೇರೆ ಬೇರೆ ಬಿಎಂಟಿಸಿ ಬಸ್ಗಳ ಚಾಲಕರಿಗೆ ತಲಾ 500 ರೂಪಾಯಿ ದಂಡ ವಿಧಿಸಿ ಚಲನ್ ಕಳುಹಿಸಲಾಗಿದ್ದು, ಈ ತಾಂತ್ರಿಕ ಪ್ರಹಸನವು ಸಾರ್ವಜನಿಕರು ಹಾಗೂ ಸಾರಿಗೆ ಸಿಬ್ಬಂದಿಯ ನಗೆಪಾಟಲಿಗೆ ಈಡಾಗಿದೆ.
ವಾಸ್ತವವಾಗಿ, ಬಿಎಂಟಿಸಿ ಬಸ್ಗಳಲ್ಲಿ ಚಾಲಕರಿಗೆ ಸೀಟ್ ಬೆಲ್ಟ್ ವ್ಯವಸ್ಥೆಯೇ ಇರುವುದಿಲ್ಲ. ಹೀಗಿದ್ದರೂ, ವಿಧಾನಸೌಧದ ಬಳಿಯ ಸಿಗ್ನಲ್ನಲ್ಲಿ ನಿಂತಿದ್ದ ಬಸ್ಗೆ ಹೆಣ್ಣೂರು ರಸ್ತೆಯಲ್ಲಿರುವ AI ಕ್ಯಾಮೆರಾ ಸೀಟ್ ಬೆಲ್ಟ್ ನಿಯಮ ಉಲ್ಲಂಘನೆ ಹೆಸರಿನಲ್ಲಿ ದಂಡ ವಿಧಿಸಿರುವುದು ತಂತ್ರಜ್ಞಾನದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದೆಡೆ ಬಸ್ನಲ್ಲಿ ಸೀಟ್ ಬೆಲ್ಟ್ ಇಲ್ಲದಿದ್ದರೂ ದಂಡ ಹಾಕಿರುವುದು, ಇನ್ನೊಂದೆಡೆ ಬಸ್ ಇರುವ ಸ್ಥಳಕ್ಕೂ ದಂಡ ವಿಧಿಸಿದ ಕ್ಯಾಮೆರಾ ಜಾಗಕ್ಕೂ ಸಂಬಂಧವೇ ಇಲ್ಲದಿರುವುದು ಸಂಚಾರ ಪೊಲೀಸರ ಕಾರ್ಯಾಚರಣೆ ಹಾಗೂ ತಂತ್ರಜ್ಞಾನದ ಲೋಪವನ್ನು ಎತ್ತಿ ತೋರಿಸಿದೆ.