ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ವೈರಲ್ ಆಗುತ್ತಿರುವ '80ರ ದಶಕದ ಫೋಟೋ ಎಡಿಟಿಂಗ್' ಟ್ರೆಂಡ್ ಕುರಿತು ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಮಾದನಾಯಕನಹಳ್ಳಿ ಪೊಲೀಸರು ಸೂಚಿಸಿದ್ದಾರೆ. ಫೋಟೋಗಳನ್ನು ಆಕರ್ಷಕವಾಗಿ ಎಡಿಟ್ ಮಾಡುವ ನೆಪದಲ್ಲಿ ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕರನ್ನು ವಂಚಿಸುವ ಮತ್ತು ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆಗಳಿದ್ದು, ಈ ಕುರಿತು ಪೊಲೀಸರು ಪ್ರಕಟಣೆ ಹೊರಡಿಸಿ ಜನಜಾಗೃತಿ ಮೂಡಿಸಿದ್ದಾರೆ.
ಇತ್ತೀಚೆಗೆ ಸಾರ್ವಜನಿಕರು ತಮ್ಮ ಇತ್ತೀಚಿನ ಫೋಟೋಗಳನ್ನು 80ರ ದಶಕದ ವಿಂಟೇಜ್ ಶೈಲಿಗೆ ಬದಲಾಯಿಸಿಕೊಳ್ಳಲು ವಿವಿಧ ಥರ್ಡ್-ಪಾರ್ಟಿ ಆ್ಯಪ್‌ಗಳು ಮತ್ತು ಆನ್‌ಲೈನ್ ಲಿಂಕ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಆದರೆ, ಇಂತಹ ಪ್ರವೃತ್ತಿಯನ್ನೇ ಬಂಡವಾಳ ಮಾಡಿಕೊಳ್ಳುವ ಸೈಬರ್ ವಂಚಕರು, ಅನುಮಾನಾಸ್ಪದ ಲಿಂಕ್‌ಗಳು ಹಾಗೂ ನಕಲಿ ಆ್ಯಪ್‌ಗಳ ಮೂಲಕ ಸಾರ್ವಜನಿಕರ ಸಾಧನಗಳಿಗೆ (ಮೊಬೈಲ್/ಕಂಪ್ಯೂಟರ್) ಪ್ರವೇಶ ಪಡೆಯುವ ಅಪಾಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಅಥವಾ ಸುರಕ್ಷಿತವಲ್ಲದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಸೈಬರ್ ದಾಳಿಗೆ ತೂಗುವ ಸಾಧ್ಯತೆ ಹೆಚ್ಚಿರುತ್ತದೆ.
ಫೋಟೋ ಎಡಿಟಿಂಗ್ ಮಾಡುವ ನೆಪದಲ್ಲಿ ಕೆಲವು ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಮಹತ್ವದ ದಾಖಲೆಗಳ ವಿವರಗಳನ್ನು ಕೋರುತ್ತವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಪಾಸ್‌ವರ್ಡ್‌ಗಳು, ಬ್ಯಾಂಕ್ ಖಾತೆಯ ವಿವರಗಳು ಅಥವಾ ಇತರೆ ಯಾವುದೇ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಇಂತಹ ಆ್ಯಪ್‌ಗಳು ಹಾಗೂ ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಮಾದನಾಯಕನಹಳ್ಳಿ ಪೊಲೀಸರು ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್‌ಗಳು ಬಂದ ತಕ್ಷಣ ಅವುಗಳನ್ನು ಪರಿಶೀಲಿಸದೆ ಅನುಸರಿಸುವುದು ಅಪಾಯಕಾರಿ. ಯಾವುದೇ ಟ್ರೆಂಡಿಂಗ್ ವಿಷಯ ಕಂಡುಬಂದರೂ ಅದರ ಹಿಂದೆ ಇರುವ ಲಿಂಕ್, ಆ್ಯಪ್ ಅಥವಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳದೆ ವೈಯಕ್ತಿಕ ಮಾಹಿತಿಯನ್ನು ನೀಡಬಾರದು. ಸಾರ್ವಜನಿಕರು ಸದಾ ಜಾಗರೂಕರಾಗಿದ್ದು, ತಮ್ಮ ಡಿಜಿಟಲ್ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.