ಬೆಂಗಳೂರು : ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನವರ ಮದ್ಯಪಾನಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯ ಸೇವನೆಗೆ ಅವಕಾಶ ನೀಡುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸುವ ಪರವಾನಗಿ ಪಡೆದ ಬಾರ್, ಪಬ್ ಹಾಗೂ ಮದ್ಯ ಮಾರಾಟ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಯುವಜನರನ್ನು ಮದ್ಯದ ದುಷ್ಪರಿಣಾಮಗಳಿಂದ ರಕ್ಷಿಸಿ, ಜವಾಬ್ದಾರಿಯುತ ಮದ್ಯ ಮಾರಾಟ ಮತ್ತು ಸೇವನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ದೇಶನ ಜಾರಿಗೊಳಿಸಲಾಗಿದೆ .
ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ‘’ಕರ್ನಾಟಕದಲ್ಲಿ, ಮದ್ಯಪಾನ ಮಾಡಲು ಮತ್ತು ಖರೀದಿಸಲು ಕಾನೂನುಬದ್ಧ ವಯಸ್ಸು 21 ವರ್ಷಗಳು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯಪಾನ ಮಾಡಲು ಅನುಮತಿ ನೀಡುವುದು ಕಾನೂನುಬಾಹಿರವಾಗಿದ್ದು, ತಪ್ಪಿದ್ದಲ್ಲಿ, ಪರವಾನಗಿ ಪಡೆದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’’ ಎಂದರು.
‘’ಈ ಅಧಿಸೂಚನೆಯ ಉದ್ದೇಶ ಅಪ್ರಾಪ್ತ ವಯಸ್ಸಿನವರು ಮದ್ಯಪಾನ ಮಾಡುವುದನ್ನು ತಡೆಯುವುದು, ಯುವಜನರನ್ನು ಇಂತಹ ದುಶ್ಚಟಗಳಿಂದ ರಕ್ಷಿಸುವುದು ಮತ್ತು ರಾಜ್ಯದಲ್ಲಿ ಜವಾಬ್ದಾರಿಯುತ ಮದ್ಯ ಮಾರಾಟ ಹಾಗೂ ಸೇವನೆಯ ಗುರಿಯನ್ನು ಹೊಂದಿದೆ. ಮದ್ಯ ಮಾರಾಟ ಮಾಡುವ ಸಂಸ್ಥೆಗಳು ಪ್ರತಿಯೊಬ್ಬರ ಗುರುತಿನ ಚೀಟಿ (ID) ಪರಿಶೀಲಿಸಿ ಸಂಗ್ರಹಿಸಬೇಕೆಂಬ ನಿಯಮ ಇಲ್ಲ. ಆದರೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನಂತೆ ಕಾಣುವವರ ಗುರುತಿನ ಚೀಟಿ ಪರಿಶೀಲಿಸಿ, ಅವರು ವಯಸ್ಕರೊಂದಿಗೆ ಬಂದಿದ್ದರೂ ಮದ್ಯ ಸೇವನೆಗೆ ಅವಕಾಶ ನೀಡಬಾರದು. ತಮ್ಮ ಮಾರಾಟ ಮತ್ತು ಸೇವನೆಯ ಸ್ಥಳದಲ್ಲಿ ಹದಿಹರೆಯದವರು ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಗಂಭೀರ ಕ್ರಮ ಎದುರಿಸಬೇಕಾಗುತ್ತದೆ’’ ಎಂದು ಸೂಚನೆ ನೀಡಿದರು.