ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭೂಮಿ ಮತ್ತೆ ಕಂಪಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲಿಪುರ ಹಾಗೂ ವೀರಮ್ಮನಹಳ್ಳಿ ನಡುವಿನ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ (NCS) ಮಾಹಿತಿಯ ಪ್ರಕಾರ, ಅಕ್ಟೋಬರ್ 24ರಂದು ನಸುಕಿನ ಜಾವ 3 ಗಂಟೆ 29 ನಿಮಿಷಕ್ಕೆ ಸಂಭವಿಸಿದ ಈ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 2.9 ರಷ್ಟು ದಾಖಲಾಗಿದೆ. ಭೂಮಿಯ ಮೇಲ್ಮೈಯಿಂದ 5 ಕಿಲೋಮೀಟರ್ ಆಳದಲ್ಲಿ ಇದರ ಕೇಂದ್ರಬಿಂದು ಪತ್ತೆಯಾಗಿದ್ದು, ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದಕ್ಕೂ ಮುನ್ನ ಶುಕ್ರವಾರ ದೊಡ್ಡಬಳ್ಳಾಪುರ ತಾಲೂಕಿನಲ್ಲೂ ಭೂಮಿ ಕಂಪಿಸಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ವರದಿ ಪ್ರಕಾರ, ಶುಕ್ರವಾರ ಬೆಳಗ್ಗೆ 9:01 ರ ಸುಮಾರಿಗೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರು 0.5 ಕಿ.ಮೀ ದೂರದಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.0 ರಷ್ಟಿದ್ದು, ಭೂಮಿಯ ಆಳದಲ್ಲಿ 10 ಕಿ.ಮೀ ಆಳದಲ್ಲಿ ಕೇಂದ್ರಬಿಂದು ದಾಖಲಾಗಿತ್ತು. ಸತತ ಎರಡು ದಿನಗಳ ಕಾಲ ಈ ಭಾಗದಲ್ಲಿ ಭೂಮಿ ಕಂಪಿಸುತ್ತಿರುವುದು ಸ್ಥಳೀಯ ಜನರಲ್ಲಿ ನಡುಕ ಹುಟ್ಟಿಸಿದ್ದು, ಅಧಿಕಾರಿಗಳು ಪರಿಸ್ಥಿತಿಯ ಮೇರೆಗೆ ಪರಿಶೀಲನೆ ನಡೆಸುತ್ತಿದ್ದಾರೆ.