ಬೆಂಗಳೂರು: ಪಬ್ ನಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಂಜು ಅಲಿಯಾಸ್ ‘ಅಮುಕು ಡುಮುಕು’ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜುಲೈ 9ರಂದು ರಾತ್ರಿ ಸುಮಾರು 9.20ರ ವೇಳೆಗೆ ಮಂಜು ಅಲಿಯಾಸ್ ‘ಅಮುಕು ಡುಮುಕು ರೆಸ್ಟೋ ಬಾರ್ ಅಂಡ್ ಪಬ್ಗೆ ಪ್ರಚಾರದ ನೆಪದಲ್ಲಿ ಬಂದಿದ್ದನು, ಆಹಾರ ಮತ್ತು ಮದ್ಯ ಸೇವಿಸಿದ ಬಳಿಕ ಬಿಲ್ ಪಾವತಿಸದೆ ತೆರಳಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ ಮಹಿಳಾ ಸಿಬ್ಬಂದಿಯೊಬ್ಬರ ಕೈ ಹಿಡಿದು ತನ್ನತ್ತ ಎಳೆದು ಅಸಭ್ಯವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಬೆಚ್ಚಿಬಿದ್ದ ಸಿಬ್ಬಂದಿ ಕೂಡಲೇ ಪಬ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ.
ಇದಾದ ಬಳಿಕ ಮತ್ತೊಬ್ಬ ಮಹಿಳಾ ಸಿಬ್ಬಂದಿಗೆ ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ ನಿಂದಿಸಿ, ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ಮಂಜು ಬಾರ್ ಮ್ಯಾನೇಜರ್ ಗೆ ಮೇಲೆ ಕೂಡ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಮಂಜು ತನ್ನ ಸ್ನೇಹಿತರೊಂದಿಗೆ ಪಬ್‌ಗೆ ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಮಂಜು ಹಾಗೂ ಆತನ ಸ್ನೇಹಿತರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
‘ಅಮುಕು ಡುಮುಕು’ ರೀಲ್ಸ್