ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕೆಪಿಎಸ್‌ಸಿಯ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಲೆಯನ್ನು ಇಡಿ ಬಂಧಿಸಿದ್ದು, ನ್ಯಾಯಾಲಯವು ಇಬ್ಬರನ್ನೂ 14 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ.
ಬೆಂಗಳೂರಿನ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಸೆಕ್ಷನ್‌ಗಳಡಿ ದಾಖಲಾಗಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಿದ ಇಡಿ ಬೆಂಗಳೂರು ವಲಯ ಕಚೇರಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಮಹತ್ವದ ಕ್ರಮ ಕೈಗೊಂಡಿದೆ.
ಪ್ರತಿ ಅಭ್ಯರ್ಥಿಗೆ 30 ರಿಂದ 40 ಲಕ್ಷ ರೂ. ಡೀಲ್
ತನಿಖೆಯ ವೇಳೆ ಬಯಲಾದ ಅಂಶಗಳ ಪ್ರಕಾರ, ಅಕ್ರಮವಾಗಿ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಯಿಂದ ಆರಂಭದಲ್ಲಿ ಬರೋಬ್ಬರಿ 80 ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ನಂತರ ಸಂಧಾನ ನಡೆಸಿ ಪ್ರತಿ ಅಭ್ಯರ್ಥಿಗೆ 30 ಲಕ್ಷದಿಂದ 40 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಮುಂಗಡ ಮೊತ್ತವನ್ನು ನಗದು ಹಾಗೂ ಬ್ಯಾಂಕಿಂಗ್ ಮಾರ್ಗಗಳ ಮೂಲಕ ಸಂಗ್ರಹಿಸಲಾಗಿತ್ತು. ಉಳಿದ ಬಾಕಿ ಮೊತ್ತದ ಖಾತರಿಗಾಗಿ ಅಭ್ಯರ್ಥಿಗಳಿಂದ ಮುಂಗಡವಾಗಿ ಸಹಿ ಮಾಡಿದ ಖಾಲಿ ಚೆಕ್‌ಗಳು ಹಾಗೂ ಪ್ರಾಮಿಸರಿ ನೋಟುಗಳನ್ನು ಪಡೆಯಲಾಗಿತ್ತು. ಇವುಗಳನ್ನು ಶೋಧ ಕಾರ್ಯಾಚರಣೆಯ ವೇಳೆ ಜಪ್ತಿ ಮಾಡಲಾಗಿದೆ. ಅಕ್ರಮ ಹಣ ಸ್ವೀಕರಿಸಲು ಬೀದರ್‌ನ ‘ಮೆಸರ್ಸ್ ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಬ್ಯಾಂಕ್ ಖಾತೆಯನ್ನು ಬಳಸಿಕೊಂಡಿರುವುದು ಪತ್ತೆಯಾಗಿದೆ.
https://twitter.com/dir_ed/status/2105233451465208065
ರೆಸಾರ್ಟ್‌ನಲ್ಲಿ ಉತ್ತರ ಬಾಯಿಪಾಠ, ವಾಹನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ರವಾನೆ
ತನಿಖೆಯಲ್ಲಿ ಅತ್ಯಂತ ಸ್ಫೋಟಕ ಸತ್ಯವೊಂದು ಹೊರಬಿದ್ದಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದ ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ಸರಿಯಾದ ಉತ್ತರಗಳ ಸಮೇತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಿ, ಬಸವರಾಜ್ ಕನ್ನಾಲೆ ಹಾಗೂ ಆತನ ಸಹಚರರ ಮೇಲ್ವಿಚಾರಣೆಯಲ್ಲಿ ಉತ್ತರಗಳನ್ನು ಬಾಯಿಪಾಠ ಮಾಡಿಸಲಾಗಿತ್ತು. ಮರುದಿನ ಪರೀಕ್ಷೆಯ ದಿನದಂದು ಅಭ್ಯರ್ಥಿಗಳನ್ನು ಬಸವರಾಜ್ ಕನ್ನಾಲೆ ಮತ್ತು ಆತನ ಸಹಚರರು ವ್ಯವಸ್ಥೆ ಮಾಡಿದ್ದ ವಾಹನಗಳಲ್ಲೇ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು.
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಪಾತ್ರವೇನು?
ಕೆಪಿಎಸ್‌ಸಿಯ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವುದು, ಪ್ರಶ್ನೆಪತ್ರಿಕೆಗಳ ಮುದ್ರಣದ ಮೇಲ್ವಿಚಾರಣೆ ಹಾಗೂ ಗೌಪ್ಯ ಪರೀಕ್ಷಾ ಸಾಮಗ್ರಿಗಳ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಅವರು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಅಕ್ರಮ ಲಂಚದ ಆಮಿಷಕ್ಕೆ ಒಳಗಾಗಿ ಪರೀಕ್ಷೆ ನಡೆಯುವ ಒಂದು ದಿನ ಮುಂಚಿತವಾಗಿಯೇ ಸರಿಯಾದ ಉತ್ತರಗಳಿದ್ದ ಪ್ರಶ್ನೆಪತ್ರಿಕೆಯನ್ನು ಬಸವರಾಜ್ ಕನ್ನಾಲೆಗೆ ಸೋರಿಕೆ ಮಾಡಿದ್ದರು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.
ಇಡಿ ಬಂಧನ ಮತ್ತು 14 ದಿನಗಳ ಕಸ್ಟಡಿ
ನ್ಯಾಯಾಂಗ ಬಂಧನದಲ್ಲಿದ್ದ ಬಸವರಾಜ್ ಕನ್ನಾಲೆಯನ್ನು ಅಕ್ರಮ ಹಣ ಸಂಗ್ರಹಣೆ ಹಾಗೂ ನಿರ್ವಹಣೆಯ ಆರೋಪದಡಿ ಸೆಪ್ಟೆಂಬರ್ 17ರಂದು ಇಡಿ ಔಪಚಾರಿಕವಾಗಿ ಬಂಧಿಸಿತ್ತು. ಸೆಪ್ಟೆಂಬರ್ 29ರಂದು ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ (CCH-4) ಹಾಜರುಪಡಿಸಿದಾಗ ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿದೆ.
ಮತ್ತೊಂದೆಡೆ, ಅಕ್ರಮಕ್ಕೆ ನೇರ ಕುಮ್ಮಕ್ಕು ನೀಡಿ ಅಪರಾಧ ಕೃತ್ಯದಿಂದ ಹಣ ಹುಟ್ಟುಹಾಕಲು ನೆರವಾದ ಆರೋಪದ ಮೇಲೆ ಸೆಪ್ಟೆಂಬರ್ 18ರಂದು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಇಡಿ ಬಂಧಿಸಿತ್ತು. ಸೆಪ್ಟೆಂಬರ್ 21ರಂದು ಪ್ರೊಡಕ್ಷನ್ ವಾರಂಟ್ ಆಧಾರದ ಮೇಲೆ ಅವರನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೂ 14 ದಿನಗಳ ಕಾಲ ಇಡಿ ಕಸ್ಟಡಿ ವಿಧಿಸಿದೆ.
ಚಿನ್ನಾಭರಣ ಖರೀದಿ, ವಿಮಾನ ಪ್ರಯಾಣಕ್ಕೆ ಕಪ್ಪುಹಣ ಬಳಕೆ
2026ರ ಆಗಸ್ಟ್ 18ರಿಂದ ಆಗಸ್ಟ್ 24ರವರೆಗೆ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆಯಲ್ಲಿ ಇನ್ನಷ್ಟು ಅಕ್ರಮಗಳು ಬಯಲಾಗಿವೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಗಳಿಸಿದ ಅಕ್ರಮ ಹಣವನ್ನು ಬ್ಯಾಂಕ್ ವರ್ಗಾವಣೆಗಳು, ಚಿನ್ನಾಭರಣಗಳ ಖರೀದಿ, ವಿಮಾನ ಪ್ರಯಾಣಕ್ಕೆ ನಗದು ಪಾವತಿ ಹಾಗೂ ವಿವಿಧ ನಗದು ವಹಿವಾಟುಗಳ ಮೂಲಕ ಬಿಳಿ ಹಣವಾಗಿ ಪರಿವರ್ತಿಸಲು (ಲೇಯರಿಂಗ್) ಯತ್ನಿಸಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂದಿನ ಸಮಗ್ರ ತನಿಖೆಯನ್ನು ಚುರುಕುಗೊಳಿಸಿದೆ.