ಶಿವಮೊಗ್ಗ: ನಗರದ ಆಲ್ಕೋಳ ವೃತ್ತದ ಬಳಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ಪ್ರಾದೇಶಿಕ ಕಚೇರಿಯಲ್ಲಿ ವಿವಿಧ ಪರೀಕ್ಷೆಗಳ ವೇಳೆ ಸಾಮೂಹಿಕ ನಕಲು (ಮಾಸ್ ಕಾಪೀ) ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಅಧಿಕೃತವಾಗಿ ಹಣ ವಸೂಲಿ ಮಾಡಿಕೊಂಡು, ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಮುಕ್ತವಾಗಿ ಕಾಪಿ ಹೊಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂಬ ಸಾರ್ವಜನಿಕ ದೂರುಗಳು ದಟ್ಟವಾಗಿವೆ.
ಈ ಅಕ್ರಮಕ್ಕೆ ಪ್ರಾದೇಶಿಕ ನಿರ್ದೇಶಕರಾದ ಬಿ.ಎಂ. ಸ್ವಾಮಿ ಅವರೇ ನೇರ ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ವಿದ್ಯಾರ್ಥಿ ವಲಯದಿಂದ ತೀವ್ರ ಆಪಾದನೆಗಳು ವ್ಯಕ್ತವಾಗಿವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಶಿಕ್ಷಣ ಸಂಸ್ಥೆಯ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.