ಕಡಿಮೆ ಬಂಡವಾಳದಲ್ಲಿ ಸ್ವಂತ ಉದ್ಯಮ ಆರಂಭಿಸಬೇಕೆಂಬ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಉತ್ತಮ ಅವಕಾಶ ಇಲ್ಲಿದೆ. ಇಂದಿನ ದಿನಗಳಲ್ಲಿ ದೊಡ್ಡ ಅಂಗಡಿ ಅಥವಾ ಭಾರಿ ಬಂಡವಾಳವಿಲ್ಲದೆಯೂ ಮನೆಯಿಂದಲೇ ಆರಂಭಿಸಬಹುದಾದ ಹತ್ತಾರು ಸಣ್ಣ ವ್ಯಾಪಾರಗಳಿವೆ. ಸರಿಯಾದ ಯೋಜನೆ, ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನವಿದ್ದರೆ ಈ ಸಣ್ಣ ಉದ್ಯಮಗಳನ್ನೇ ಕ್ರಮೇಣ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದು.
ಕೇವಲ ₹1,000 ಬಂಡವಾಳ, ಒಂದು ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವಿದ್ದರೆ ಸಾಕು, ಈ ಉದ್ಯಮಗಳನ್ನು ಸುಲಭವಾಗಿ ಆರಂಭಿಸಬಹುದು. ಆರಂಭದಲ್ಲಿ ಸಣ್ಣದಾಗಿ ಶುರುಮಾಡಿ, ನಂತರ ವ್ಯವಹಾರ ವಿಸ್ತರಿಸುತ್ತಾ ಹೋದಂತೆ ಲಕ್ಷ ರೂಪಾಯಿಗಳವರೆಗೂ ಆದಾಯ ಗಳಿಸಬಹುದು ಎನ್ನುತ್ತಾರೆ ತಜ್ಞರು. ಅಂತಹ ಕಡಿಮೆ ಖರ್ಚಿನ ಬ್ಯುಸಿನೆಸ್ ಐಡಿಯಾಗಳು ಇಲ್ಲಿವೆ:
ಡಿಜಿಟಲ್ ವಿಸಿಟಿಂಗ್ ಕಾರ್ಡ್‌ಗಳು: ಸಣ್ಣ ವ್ಯಾಪಾರಿಗಳಿಗೆ ಆಕರ್ಷಕ ಡಿಜಿಟಲ್ ವಿಸಿಟಿಂಗ್ ಕಾರ್ಡ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಬಹುದು.
ಹತ್ತಿ ಬತ್ತಿ ತಯಾರಿಕೆ: ಮನೆಯಲ್ಲೇ ದೇವಸ್ಥಾನಗಳಿಗೆ ಹಾಗೂ ದಿನಸಿ ಅಂಗಡಿಗಳಿಗೆ ಅಗತ್ಯವಿರುವ ಪೂಜಾ ಬತ್ತಿಗಳನ್ನು ತಯಾರಿಸಿ ಪೂರೈಸಬಹುದು.
ಹ್ಯಾಂಡ್‌ಮೇಡ್ ಆಭರಣಗಳು: ಕೈಯಿಂದಲೇ ಆಕರ್ಷಕ ಬಳೆಗಳು, ಸರ ಹಾಗೂ ಇತರೆ ಆಭರಣಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟ ಮಾಡಬಹುದು.
ಮನೆಯಲ್ಲೇ ತಯಾರಿಸಿದ ತಿಂಡಿಗಳು: ಚಕ್ಕುಲಿ, ಹಪ್ಪಳ, ನಿಪ್ಪಟ್ಟು ಅಥವಾ ವಿವಿಧ ರೀತಿಯ ಮಂಡಕ್ಕಿ ಮಿಕ್ಸ್ಚರ್‌ಗಳನ್ನು ತಯಾರಿಸಿ ಸ್ಥಳೀಯ ಅಂಗಡಿಗಳಿಗೆ ಅಥವಾ ಮಾರುಕಟ್ಟೆಗೆ ಪೂರೈಸಬಹುದು.
ಪಾಪ್‌ಕಾರ್ನ್ ವ್ಯಾಪಾರ: ಮನೆಯಲ್ಲೇ ರುಚಿಕರವಾದ ಪಾಪ್‌ಕಾರ್ನ್ ತಯಾರಿಸಿ, ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಹತ್ತಿರದ ಅಂಗಡಿಗಳಿಗೆ ಅಥವಾ ಸಣ್ಣ ಸ್ಟಾಲ್‌ಗಳ ಮೂಲಕ ಮಾರಾಟ ಮಾಡಬಹುದು.
ಡಿಜಿಟಲ್ ಆಹ್ವಾನ ಪತ್ರಿಕೆಗಳು: ಕ್ಯಾನ್ವಾ (Canva) ದಂತಹ ಉಚಿತ ಟೂಲ್‌ಗಳನ್ನು ಬಳಸಿ ಮದುವೆ, ಹುಟ್ಟುಹಬ್ಬ ಹಾಗೂ ಇತರೆ ಸಮಾರಂಭಗಳಿಗೆ ಆಕರ್ಷಕ ಡಿಜಿಟಲ್ ಆಮಂತ್ರಣ ಪತ್ರಿಕೆಗಳನ್ನು ವಿನ್ಯಾಸಗೊಳಿಸಿ ನೀಡಬಹುದು.
ವಾಟ್ಸಾಪ್ ರೀಸೆಲ್ಲಿಂಗ್: ಯಾವುದೇ ಸರಕನ್ನು ಮೊದಲೇ ಖರೀದಿಸಿ ಇಟ್ಟುಕೊಳ್ಳುವ ಅಗತ್ಯವಿಲ್ಲದೆ, ಮೀಶೋ (Meesho) ದಂತಹ ಪ್ಲಾಟ್‌ಫಾರ್ಮ್‌ಗಳ ಉತ್ಪನ್ನಗಳನ್ನು ವಾಟ್ಸಾಪ್ ಮೂಲಕ ಶೇರ್ ಮಾಡಿ ಕಮಿಷನ್ ಗಳಿಸಬಹುದು.
ಕಂಟೆಂಟ್ ಹಾಗೂ ಸ್ಕ್ರಿಪ್ಟ್ ರೈಟಿಂಗ್: ಯೂಟ್ಯೂಬ್ ಚಾನೆಲ್‌ಗಳು, ಬ್ಲಾಗ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಮನೆಯಿಂದಲೇ ಕಂಟೆಂಟ್ ಬರೆದುಕೊಡುವ ಮೂಲಕ ಫ್ರೀಲಾನ್ಸರ್ ಆಗಿ ಉತ್ತಮ ಆದಾಯ ಗಳಿಸಬಹುದು.
ವ್ಯಾಪಾರವನ್ನು ಬೆಳೆಸಿಕೊಳ್ಳುವುದು ಹೇಗೆ?
ಆರ್ಡರ್ ಆಧಾರಿತ ಸಿದ್ಧತೆ: ನಷ್ಟವನ್ನು ತಪ್ಪಿಸಲು ಗ್ರಾಹಕರಿಂದ ಆರ್ಡರ್ ಬಂದ ನಂತರವೇ ಸರಕುಗಳನ್ನು ಸಿದ್ಧಪಡಿಸಿ.
ಉಚಿತ ಪ್ರಚಾರ: ಗ್ರಾಹಕರನ್ನು ತಲುಪಲು ವಾಟ್ಸಾಪ್ ಬ್ಯುಸಿನೆಸ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಉಚಿತ ಸಾಮಾಜಿಕ ಮಾಧ್ಯಮಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಿ.
ಮರುಹೂಡಿಕೆ: ಆರಂಭದಲ್ಲಿ ಬಂದ ಲಾಭವನ್ನು ಖರ್ಚು ಮಾಡದೆ, ಮತ್ತೆ ವ್ಯವಹಾರದ ಬೆಳವಣಿಗೆಗೆ ಮರುಹೂಡಿಕೆ ಮಾಡಿ.
ನಂಬಿಕೆ ಮತ್ತು ಗುಣಮಟ್ಟ: ಉತ್ತಮ ನಡವಳಿಕೆ, ಸಮಯಕ್ಕೆ ಸರಿಯಾಗಿ ಡೆಲಿವರಿ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಿರುವುದು ಗ್ರಾಹಕರ ನಂಬಿಕೆಯನ್ನು ಹೆಚ್ಚಿಸುತ್ತದೆ.