ಮೈಸೂರು: ಕಳೆದ ದಸರಾ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿದ್ದ 9 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗೆ ಮೈಸೂರಿನ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಪ್ರಕರಣದ ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿದ ವಿಶೇಷ ಪೋಕ್ಸೋ ಕೋರ್ಟ್ನ ನ್ಯಾಯಾಧೀಶ ಆನಂದ್ ಪಿ. ಉಗಾಡೆ ಅವರು, ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ನನ್ನು ದೋಷಿ ಎಂದು ಘೋಷಿಸಿ ಈ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಏನಿದು ದುರಂತ ಘಟನೆ?
ಕಲಬುರಗಿ ಮೂಲದ ಬಡ ಕುಟುಂಬವೊಂದು ದಸರಾ ಸಂದರ್ಭದಲ್ಲಿ ಬಲೂನ್ ಮಾರಿ ಜೀವನ ಸಾಗಿಸಲು ನಗರಕ್ಕೆ ಆಗಮಿಸಿತ್ತು. ಇಟ್ಟಿಗೆಗೂಡಿನ ವಸ್ತುಪ್ರದರ್ಶನ ಮೈದಾನದ ಎದುರಿನ ತಾತ್ಕಾಲಿಕ ಶೆಡ್ನಲ್ಲಿ ಇಡೀ ಕುಟುಂಬ ಆಶ್ರಯ ಪಡೆದಿತ್ತು. 2025ರ ಅಕ್ಟೋಬರ್ 8ರ ಮಧ್ಯರಾತ್ರಿ, ಕುಟುಂಬದವರೆಲ್ಲರೂ ನಿದ್ರೆಯಲ್ಲಿದ್ದಾಗ ಶೆಡ್ನಲ್ಲಿದ್ದ ಬಾಲಕಿಯನ್ನು ಅಪಹರಿಸಲಾಗಿತ್ತು. ಬೆಳಗಾಗುವಷ್ಟರಲ್ಲಿ ಶೆಡ್ನ ಸಮೀಪದಲ್ಲೇ ಆಕೆಯ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.
24 ಗಂಟೆಯೊಳಗೆ ಆರೋಪಿ ಸೆರೆ, ಎನ್ಕೌಂಟರ್:
ಘಟನೆ ಕುರಿತು ನಜರ್ಬಾದ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ನೆಟ್ವರ್ಕ್ ಜಾಡು ಹಿಡಿದು ಕೊಳ್ಳೇಗಾಲದಲ್ಲಿ ಆರೋಪಿ ಕಾರ್ತಿಕ್ನನ್ನು 24 ಗಂಟೆಯೊಳಗೆ ಬಂಧಿಸಿದ್ದರು. ನಂತರ ಸ್ಥಳ ಮಹಜರು ಮುಗಿಸಿ ಕರೆತರುವ ವೇಳೆ, ಮೇಟಗಳ್ಳಿ ಸಮೀಪ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದಿದ್ದರು.
ಹಳೇ ಅಪರಾಧ ಹಿನ್ನೆಲೆ:
ಖಾಸಗಿ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಈಗಾಗಲೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿ. ಈ ಹಿಂದೆ 2019ರಲ್ಲಿ ಕೊಳ್ಳೇಗಾಲದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಇದೀಗ ಅಮಾಯಕ ಬಾಲಕಿಯ ಜೀವ ತೆಗೆದ ಈತನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟಿದೆ.