ಮಳೆಗಾಲ ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತವೆ. ಪ್ರತಿವರ್ಷ ಸಾವಿರಾರು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತಿದ್ದು, ಕೆಲವೊಮ್ಮೆ ಪ್ರಾಣಾಪಾಯದ ಪರಿಸ್ಥಿತಿಯೂ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ನೆಮ್ಮದಿ ನೀಡುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದೇಶದಲ್ಲಿ ಮೊದಲ ಬಾರಿಗೆ ಡೆಂಗ್ಯೂ ತಡೆಗಟ್ಟುವ ‘QDENGA’ ಲಸಿಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆ ನೀಡಿದೆ.
ಹೌದು. ಭಾರತದಲ್ಲಿ ಡೆಂಗ್ಯೂ ತಡೆಗೆ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಜಪಾನ್‌ನ ಟಕೆಡಾ (Takeda) ಕಂಪನಿ ಅಭಿವೃದ್ಧಿಪಡಿಸಿರುವ QDENGA ಡೆಂಗ್ಯೂ ಲಸಿಕೆಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆ DCGI ಮಾರುಕಟ್ಟೆ ಅನುಮೋದನೆ ನೀಡಿದೆ. 4 ರಿಂದ 60 ವರ್ಷದವರಿಗಾಗಿ ಅನುಮೋದನೆ ಪಡೆದಿರುವ ಈ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ, ಮೂರು ತಿಂಗಳ ಅಂತರದಲ್ಲಿ ನೀಡಲಾಗುತ್ತದೆ. ವಿಶೇಷವೆಂದರೆ, ಈ ಲಸಿಕೆ ಪಡೆಯಲು ಮೊದಲು ಡೆಂಗ್ಯೂ ಸೋಂಕು ಬಂದಿದೆಯೇ ಎಂಬ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿಲ್ಲ. ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಪ್ರಭೇದಗಳ ವಿರುದ್ಧ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿರುವ ಈ ಲಸಿಕೆ, ದೇಶದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
QDENGA ಲಸಿಕೆಯ ವಿಶೇಷತೆ ಏನು?
ಈ ಲಸಿಕೆಯ ಪ್ರಮುಖ ವಿಶೇಷತೆ ಎಂದರೆ, ಲಸಿಕೆ ಪಡೆಯುವ ಮೊದಲು ಡೆಂಗ್ಯೂ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿಲ್ಲ. ಈ ಹಿಂದೆ ಡೆಂಗ್ಯೂ ಬಂದವರೂ, ಎಂದಿಗೂ ಡೆಂಗ್ಯೂ ಬಾರದವರೂ ಈ ಲಸಿಕೆಯನ್ನು ಪಡೆಯಬಹುದು. ಇದರಿಂದ ಡೆಂಗ್ಯೂ ತಡೆಗಟ್ಟುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯಾರಿಗೆ ನೀಡಲಾಗುತ್ತದೆ?
- 4 ರಿಂದ 60 ವರ್ಷದೊಳಗಿನವರಿಗೆ ಲಸಿಕೆ ನೀಡಲು ಅನುಮತಿ.
- ಜಪಾನ್‌ನ ಔಷಧ ಕಂಪನಿ ಟಕೇಡಾ (Takeda) ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಎಷ್ಟು ಡೋಸ್?
- ಒಟ್ಟು 2 ಡೋಸ್ ನೀಡಲಾಗುತ್ತದೆ.
- ಮೊದಲ ಡೋಸ್ ಪಡೆದ 3 ತಿಂಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ.
- ಈ ಲಸಿಕೆಯನ್ನು ಚರ್ಮದ ಕೆಳಭಾಗಕ್ಕೆ (Subcutaneous Injection) ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ.
ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ
ಜಗತ್ತಿನಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗುವ ದೇಶಗಳಲ್ಲಿ ಭಾರತವೂ ಒಂದು. ಜಾಗತಿಕ ಡೆಂಗ್ಯೂ ಪ್ರಕರಣಗಳಲ್ಲಿ ಸುಮಾರು ಮೂರನೇ ಒಂದು ಭಾಗ ಭಾರತದಲ್ಲೇ ದಾಖಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು ಸುಮಾರು 11 ಪಟ್ಟು ಹೆಚ್ಚಾಗಿವೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. 2025ರಲ್ಲಿ ಮಾತ್ರ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನಿಜವಾದ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ನಾಲ್ಕು ವೈರಸ್ ಪ್ರಭೇದಗಳಿಂದ ರಕ್ಷಣೆ
ಡೆಂಗ್ಯೂ ವೈರಸ್‌ಗೆ ನಾಲ್ಕು ವಿಭಿನ್ನ ಸೆರೋಟೈಪ್‌ಗಳು (Serotypes) ಇವೆ. ಈ ನಾಲ್ಕೂ ವೈರಸ್ ಪ್ರಭೇದಗಳಿಂದ ರಕ್ಷಣೆ ನೀಡುವಂತೆ QDENGA ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಕಂಪನಿಯ ಮಾಹಿತಿಯ ಪ್ರಕಾರ:
- 28 ಸಾವಿರಕ್ಕೂ ಹೆಚ್ಚು ಜನರ ಮೇಲೆ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ.
- ಎರಡನೇ ಡೋಸ್ ಪಡೆದ 12 ತಿಂಗಳ ಬಳಿಕ ಡೆಂಗ್ಯೂ ತಡೆಗಟ್ಟುವಲ್ಲಿ 80.2% ಪರಿಣಾಮಕಾರಿತ್ವ ಕಂಡುಬಂದಿದೆ.
- ಡೆಂಗ್ಯೂ ಕಾರಣದಿಂದ ಆಸ್ಪತ್ರೆ ಸೇರುವ ಅಪಾಯವನ್ನು 90.4%ರವರೆಗೆ ಕಡಿಮೆ ಮಾಡುತ್ತದೆ.
- 4.5 ವರ್ಷಗಳ ದೀರ್ಘಾವಧಿಯ ಅಧ್ಯಯನದಲ್ಲಿ ಆಸ್ಪತ್ರೆ ಚಿಕಿತ್ಸೆ ಅಗತ್ಯವಾಗುವ ಅಪಾಯವನ್ನು 84.1%ರವರೆಗೆ ಕಡಿಮೆ ಮಾಡಿರುವುದು ದೃಢಪಟ್ಟಿದೆ.
WHO ಶಿಫಾರಸು
ಈ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಈಗಾಗಲೇ ಶಿಫಾರಸು ಮಾಡಿದೆ. ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿರುವುದರಿಂದ WHO ಪ್ರೀಕ್ವಾಲಿಫಿಕೇಶನ್ ಕೂಡ ಪಡೆದಿದೆ.
ಪ್ರಸ್ತುತ ಭಾರತ ಸೇರಿದಂತೆ 43 ದೇಶಗಳಲ್ಲಿ ಈ ಲಸಿಕೆಗೆ ಅನುಮೋದನೆ ದೊರೆತಿದೆ. ಜಾಗತಿಕ ಮಟ್ಟದಲ್ಲಿ ಈಗಾಗಲೇ 3.2 ಕೋಟಿಗೂ ಹೆಚ್ಚು ಡೋಸ್‌ಗಳು ವಿತರಣೆಗೊಂಡಿವೆ. ಬ್ರೆಜಿಲ್, ಅರ್ಜೆಂಟಿನಾ, ಕೊಲಂಬಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳ ಸಾರ್ವಜನಿಕ ಆರೋಗ್ಯ ಲಸಿಕಾ ಕಾರ್ಯಕ್ರಮಗಳಲ್ಲಿ ಇದನ್ನು ಬಳಸಲಾಗುತ್ತಿದೆ.
ಲಸಿಕೆ ಪಡೆದ ಬಳಿಕವೂ ಈ ಮುನ್ನೆಚ್ಚರಿಕೆ ಅಗತ್ಯ
ವೈದ್ಯರ ಸಲಹೆಯಂತೆ ಲಸಿಕೆ ಪಡೆದ ನಂತರವೂ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು:
- ಮನೆ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.
- ಪೂರ್ಣ ತೋಳಿನ ಬಟ್ಟೆ ಧರಿಸಿ.
- ಸೊಳ್ಳೆ ನಿವಾರಕ ಔಷಧಿಗಳು ಹಾಗೂ ಸೊಳ್ಳೆ ಪರದೆಗಳನ್ನು ಬಳಸಿ.
- ಅಧಿಕ ಜ್ವರ, ದೇಹ ನೋವು, ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಡೆಂಗ್ಯೂ ಪ್ರಮುಖ ಲಕ್ಷಣಗಳು
- ತೀವ್ರ ಜ್ವರ
- ತಲೆನೋವು
- ಕಣ್ಣಿನ ಹಿಂಭಾಗದಲ್ಲಿ ನೋವು
- ಸ್ನಾಯು ಮತ್ತು ಕೀಲು ನೋವು
- ವಾಂತಿ ಅಥವಾ ವಾಕರಿಕೆ
- ಚರ್ಮದ ಮೇಲೆ ಕೆಂಪು ದದ್ದು
- ತೀವ್ರ ಸ್ಥಿತಿಯಲ್ಲಿ ಮೂಗು ಅಥವಾ ಒಸಡುಗಳಿಂದ ರಕ್ತಸ್ರಾವ, ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಾಗುವುದು