ಬೆಂಗಳೂರು : ಅನುಮತಿಯಿಲ್ಲದೇ ನಾಗರಿಕರ ಆಧಾರ್ ದತ್ತಾಂಶ ಮತ್ತು ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿ (Pre-activated SIM cards) ಮಾರಾಟ ಮಾಡುತ್ತಿರುವ ಜಾಲದ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ರೀತಿಯ ಸೈಬರ್ ಅಪರಾಧಗಳ ತನಿಖೆಯನ್ನು ನಡೆಸಲು ಮತ್ತು ತಡೆಗಟ್ಟಲು ಅಗತ್ಯವಾದ ಸೂಕ್ತ ಮಾರ್ಗಸೂಚಿಗಳನ್ನು ತಕ್ಷಣವೇ ರಚಿಸುವಂತೆ ಸೈಬರ್ ಕಮಾಂಡ್ ಪೊಲೀಸ್ ಮಹಾನಿರ್ದೇಶಕರಿಗೆ (DGP) ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ಪೂರ್ವಭಾವಿಯಾಗಿ ಸಕ್ರಿಯಗೊಳಿಸಲಾಗಿದ್ದ 75 ಅಕ್ರಮ ಸಿಮ್ ಕಾರ್ಡ್‌ಗಳನ್ನು ಹೊಂದಿದ್ದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು, ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿ ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಸಿಮ್ ಕಾರ್ಡ್ ಕೇವಲ ಸಾಧನವಲ್ಲ, ಅದು ಡಿಜಿಟಲ್ ಗುರುತು:
ಪ್ರಕರಣದ ವಿಚಾರಣೆ ವೇಳೆ ಅಭಿಪ್ರಾಯಪಟ್ಟ ಪೀಠವು, "ಸಿಮ್ ಕಾರ್ಡ್ ಎಂಬುದು ಕೇವಲ ಟೆಲಿಕಾಂ ನೆಟ್‌ವರ್ಕ್ ಬಳಸುವ ಸಾಧನವಲ್ಲ; ಅದು ವ್ಯಕ್ತಿಯ ಡಿಜಿಟಲ್ ಗುರುತು, ಒಟಿಪಿ (OTP) ಸ್ವೀಕರಿಸುವ ಮಾಧ್ಯಮ ಹಾಗೂ ಬ್ಯಾಂಕಿಂಗ್ ಸೇರಿದಂತೆ ಪ್ರಮುಖ ಹಣಕಾಸು ವ್ಯವಹಾರ ನಡೆಸುವ ಅತ್ಯಂತ ಸೂಕ್ಷ್ಮ ತಂತ್ರಜ್ಞಾನವಾಗಿದೆ. ಅಮಾಯಕರ ಹೆಸರಿನಲ್ಲಿ ಅನಧಿಕೃತವಾಗಿ ಸಿಮ್ ಕಾರ್ಡ್ ಸಕ್ರಿಯಗೊಳಿಸುವುದರಿಂದ, ಆ ಅಮಾಯಕರು ಅರಿಯದೆಯೇ ಸೈಬರ್ ಅಪರಾಧ ಹಾಗೂ ಹಣಕಾಸು ವಂಚನೆಯ ಜಾಲದಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ" ಎಂದು ಎಚ್ಚರಿಸಿದೆ.
ಸೈಬರ್ ಕಮಾಂಡ್‌ನಿಂದ ಕಟ್ಟುನಿಟ್ಟಿನ ತನಿಖಾ ವಿಧಾನ:
ಅಮಾಯಕರ ಹೆಸರಿನಲ್ಲಿ ನೋಂದಾಯಿತವಾದ ಸಿಮ್ ಕಾರ್ಡ್‌ಗಳ ದುರ್ಬಳಕೆ ತಡೆಯಲು ಪೊಲೀಸ್ ಪ್ರಾಧಿಕಾರಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಅನಧಿಕೃತ ಸಿಮ್ ಸಕ್ರಿಯಗೊಳಿಸುವಿಕೆಯ ಕುರಿತು ಮಾಹಿತಿ ಬಂದ ತಕ್ಷಣವೇ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಇಂತಹ ಕೃತ್ಯಗಳ ಹಿನ್ನೆಲೆಯಲ್ಲಿರುವ ಅಕ್ರಮ ಜಾಲವನ್ನು ಭೇದಿಸಲು ಹಾಗೂ ಭವಿಷ್ಯದಲ್ಲಿ ಇಂತಹ ಅಪರಾಧಗಳು ಮರುಕಳಿಸದಂತೆ ತನಿಖಾ ಪ್ರಕ್ರಿಯೆಯನ್ನು ಮತ್ತಷ್ಟು ತೀವ್ರಗೊಳಿಸಲು ಸೈಬರ್ ಕಮಾಂಡ್ ಡಿಜಿಪಿಗೆ ಸೂಚಿಸಲಾಗಿದೆ.
ಟೆಲಿಕಾಂ ಸಂಸ್ಥೆಗಳ ಪ್ರಕ್ರಿಯೆಗಳ ಪರಿಶೀಲನೆಗೆ ಸೂಚನೆ:
ಜಿಯೋ ಮತ್ತು ವೊಡಾಫೋನ್ ಸೇರಿದಂತೆ ದೇಶದ ಪ್ರಮುಖ ಮೊಬೈಲ್ ಸೇವಾದಾತ ಸಂಸ್ಥೆಗಳು ಸಿಮ್ ಕಾರ್ಡ್‌ಗಳ ವಿತರಣೆ ಮತ್ತು ಆಕ್ಟಿವೇಶನ್‌ಗೆ ಅನುಸರಿಸುತ್ತಿರುವ ಪ್ರಸ್ತುತ ಪ್ರಕ್ರಿಯೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಸಕ್ರಿಯಗೊಳಿಸದ ಸಿಮ್ ಕಾರ್ಡ್‌ಗಳ ಸಂಗ್ರಹಣೆ, ಸಾಗಣೆ, ವಿತರಕರು ಹಾಗೂ ಮಧ್ಯವರ್ತಿಗಳಿಗೆ ನೀಡಿ ಹಿಂಪಡೆಯಲಾದ ಸಿಮ್ ಕಾರ್ಡ್‌ಗಳ ಲೆಕ್ಕಪತ್ರ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ದಾಖಲಿಸಬೇಕು. ಗ್ರಾಹಕರ ವಿವರಗಳ ಪರಿಶೀಲನೆಯಲ್ಲಿ ಯಾವುದೇ ಲೋಪಗಳು ಉಂಟಾಗದಂತೆ ಸಮರ್ಪಕ ವ್ಯವಸ್ಥೆ ರೂಪಿಸಬೇಕು ಎಂದು ಪೀಠ ಒತ್ತಾಯಿಸಿದೆ.