ಬೆಂಗಳೂರು: ರಾಜ್ಯದ ಪಡಿತರ ಚೀಟಿ ಫಲಾನುಭವಿಗಳು ಇ-ಕೆವೈಸಿ (e-KYC) ದೃಢೀಕರಣ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನವೆಂಬರ್ 10ರವರೆಗೆ ವಿಸ್ತರಿಸಿ ಆದೇಶಿಸಿದೆ. ಈ ಮೊದಲು ಅಕ್ಟೋಬರ್ 20 ಕೊನೆಯ ದಿನವಾಗಿತ್ತು. ಹೊರರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಇ-ಕೆವೈಸಿ ಪ್ರಕ್ರಿಯೆಯ ಗಡುವನ್ನು ವಿಸ್ತರಿಸಲಾಗಿದ್ದು, ನಿಗದಿತ ಸಮಯದೊಳಗೆ ಎಲ್ಲರೂ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಲಾಖೆ ಸೂಚನೆ ನೀಡಿದೆ.
ಇಲಾಖೆಯ ಮಾಹಿತಿಯ ಪ್ರಕಾರ, ಒಟ್ಟು 1.15 ಕೋಟಿಗೂ ಅಧಿಕ ಫಲಾನುಭವಿಗಳು ತಕ್ಷಣವೇ ಇ-ಕೆವೈಸಿ ಮಾಡಿಸಬೇಕಾಗಿದೆ. ಇದರಲ್ಲಿ ಒಂದು ವರ್ಷಕ್ಕೂ ಮೇಲ್ಪಟ್ಟು ಇ-ಕೆವೈಸಿ ನವೀಕರಿಸದ 1,15,87,298 ಫಲಾನುಭವಿಗಳು, ಇದುವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3.82 ಲಕ್ಷಕ್ಕೂ ಹೆಚ್ಚು ಜನರು ಹಾಗೂ 5 ವರ್ಷಕ್ಕೂ ಮೇಲ್ಪಟ್ಟು ಇ-ಕೆವೈಸಿ ನವೀಕರಿಸದ 54.27 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಸೇರಿದ್ದಾರೆ. ನಿಗದಿತ ದಿನಾಂಕದೊಳಗೆ ಇ-ಕೆವೈಸಿ ದೃಢೀಕರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ಲಭ್ಯತೆಯಲ್ಲಿ ತೊಂದರೆಯಾಗಬಹುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
'ಅನ್ನಸೇವೆ' ಆ್ಯಪ್ ದೇಶಾದ್ಯಂತ ಲಭ್ಯ: ಹೊರರಾಜ್ಯಗಳಲ್ಲಿ ಉದ್ಯೋಗ ಕಂಡುಕೊಂಡಿರುವ ರಾಜ್ಯದ ಪಡಿತರ ಚೀಟಿದಾರರಿಗೆ ಸುಲಭವಾಗಿ ಇ-ಕೆವೈಸಿ ಮಾಡಲು 'ಅನ್ನಸೇವೆ' (Anna Seve) ಮೊಬೈಲ್ ಅಪ್ಲಿಕೇಶನ್‌ನ ಲಭ್ಯತೆಯನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನ್ನಸೇವೆ ಆ್ಯಪ್‌ನ ಅಪ್‌ಡೇಟ್ ಲಭ್ಯವಿದ್ದು, ಅದನ್ನು ಡೌನ್‌ಲೋಡ್ ಮಾಡಿಕೊಂಡು ಫಲಾನುಭವಿಗಳು ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದು. ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ (Ration Shops) 'ಆಹಾರ' ತಂತ್ರಾಂಶದ ಮೂಲಕ ಇ-ಕೆವೈಸಿ ದೃಢೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.