ಬೆಂಗಳೂರು : ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಮುನ್ನಡೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ಜಾಗತಿಕ ಉದ್ಯಮ ನಾಯಕರೊಂದಿಗೆ ನಡೆದ KATALYST CONNECT ಕಾರ್ಯಕ್ರಮದಲ್ಲಿ 2029ರೊಳಗೆ 500 ಹೊಸ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳು (GCCs) ಸ್ಥಾಪನೆ, 3.5 ಲಕ್ಷ ಗುಣಮಟ್ಟದ ಉದ್ಯೋಗ ಸೃಷ್ಟಿ ಹಾಗೂ 50 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಉತ್ಪಾದನೆ ಸಾಧಿಸುವ ಗುರಿಯನ್ನು ಪ್ರಕಟಿಸಿದರು.
ಹೌದು. 2029ರೊಳಗೆ 500 ಹೊಸ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳ (GCC) ಸ್ಥಾಪನೆ, 3.5 ಲಕ್ಷ ಗುಣಮಟ್ಟದ ಉದ್ಯೋಗ ಸೃಷ್ಟಿ ಹಾಗೂ 50 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಉತ್ಪಾದನೆ ಗುರಿಯೊಂದಿಗೆ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷಿ ಟೆಕ್ ರೋಡ್ಮ್ಯಾಪ್ ಪ್ರಕಟಿಸಿದೆ. ಬೆಂಗಳೂರಿನಲ್ಲಿ ನಡೆದ ‘KATALYST CONNECT’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಘೋಷಣೆ ಮಾಡಿದ್ದು, ರಾಜ್ಯವನ್ನು ಜಾಗತಿಕ ತಂತ್ರಜ್ಞಾನ ಮತ್ತು ನವೋದ್ಯಮ ಕೇಂದ್ರವನ್ನಾಗಿ ಮತ್ತಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು ರಾಜ್ಯದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಂಯುಕ್ತವಾಗಿ ಆಯೋಜಿಸಿತ್ತು. ಇದು ಕೇವಲ ಸಭೆಯಲ್ಲದೆ, ಜಾಗತಿಕ ಕಂಪನಿಗಳ ಭಾರತ ಘಟಕಗಳ ಮುಖ್ಯಸ್ಥರಿಂದ ಸರ್ಕಾರಕ್ಕೆ ನೇರ ಸಲಹೆಗಳನ್ನು ಪಡೆಯುವ ವೇದಿಕೆಯಾಗಿ ರೂಪುಗೊಂಡಿತ್ತು.
GCC ಎಂದರೇನು?
ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳು (Global Capability Centres – GCCs) ಎಂದರೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಎಂಜಿನಿಯರಿಂಗ್, ಸಂಶೋಧನೆ, ಹಣಕಾಸು, ಉತ್ಪನ್ನ ವಿನ್ಯಾಸ, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಸೇವೆಗಳು ಸೇರಿದಂತೆ ಪ್ರಮುಖ ಕಾರ್ಯಾಚರಣೆಗಳನ್ನು ನಿರ್ವಹಿಸಲು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಥಾಪಿಸುವ ಕೇಂದ್ರಗಳು.
ಒಮ್ಮೆ ಬ್ಯಾಕ್ಆಫೀಸ್ಗಳೆಂದು ಪರಿಗಣಿಸಲ್ಪಟ್ಟಿದ್ದ ಈ ಕೇಂದ್ರಗಳು ಇಂದು ಜಾಗತಿಕ ಮಟ್ಟದ ಉತ್ಪನ್ನ ಅಭಿವೃದ್ಧಿ ಹಾಗೂ ತಂತ್ರ ರೂಪಿಸುವ ಪ್ರಮುಖ ಕೇಂದ್ರಗಳಾಗಿ ಬೆಳೆದಿವೆ. ಈ ಬೆಳವಣಿಗೆಯ ಕೇಂದ್ರಬಿಂದುವಾಗಿ ಕರ್ನಾಟಕ, ವಿಶೇಷವಾಗಿ ಬೆಂಗಳೂರು ಹೊರಹೊಮ್ಮಿದೆ.
ಟಾರ್ಗೆಟ್ ಇಂಡಿಯಾ ಕ್ಯಾಂಪಸ್’ಗೆ ಸಿಎಂ ಭೇಟಿ
ಸಭೆಗೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಮೆರಿಕದ ಪ್ರಮುಖ ಚಿಲ್ಲರೆ ವ್ಯಾಪಾರ ಸಂಸ್ಥೆ Target Corporationನ ಭಾರತ ಘಟಕ Target in India ಕ್ಯಾಂಪಸ್ಗೆ ಭೇಟಿ ನೀಡಿ, ಅಲ್ಲಿನ ತಂತ್ರಜ್ಞಾನ, AI, ಹಣಕಾಸು, ಡಿಜಿಟಲ್, ಸರಬರಾಜು ಸರಪಳಿ, ಮರ್ಚೆಂಡೈಸಿಂಗ್ ಹಾಗೂ ಸ್ಟೋರ್ ವಿನ್ಯಾಸ ವಿಭಾಗಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.ಈ ಭೇಟಿ ಮೂಲಕ ಕರ್ನಾಟಕದ GCCಗಳು ಕೇವಲ ಸೇವಾ ಕೇಂದ್ರಗಳಲ್ಲ, ಜಾಗತಿಕ ಮಟ್ಟದ ವ್ಯವಹಾರ ತಂತ್ರಗಳನ್ನು ರೂಪಿಸುವ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂಬ ಸಂದೇಶವನ್ನು ಸರ್ಕಾರ ನೀಡಿತು.
150ಕ್ಕೂ ಹೆಚ್ಚು ಜಾಗತಿಕ ಕಂಪನಿಗಳ ಭಾಗವಹಿಸುವಿಕೆ
ಕಾರ್ಯಕ್ರಮದಲ್ಲಿ Google, Target, Intel, IBM, Anthropic, Nokia, Bosch, JPMorgan Chase, HSBC, Chevron, Philips, Thermo Fisher Scientific, Takeda, Novo Nordisk Global Business Services, Lowe’s India, Rolls-Royce, Raytheon, Ford, eBay, Snowflake, Carl Zeiss, Collins Aerospace, Johnson Controls, Wayfair, Waters, Verint, A.P. Moller-Maersk ಹಾಗೂ Delta Air Lines ಸೇರಿದಂತೆ 150ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
2029ರೊಳಗಿನ ಕರ್ನಾಟಕದ ಗುರಿಗಳು
• 500 ಹೊಸ GCCಗಳ ಸ್ಥಾಪನೆ
• 3.5 ಲಕ್ಷ ಗುಣಮಟ್ಟದ ಉದ್ಯೋಗ ಸೃಷ್ಟಿ
• 50 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಉತ್ಪಾದನೆ
• 150ಕ್ಕೂ ಹೆಚ್ಚು GCC ನಾಯಕರೊಂದಿಗೆ ಸಮಾಲೋಚನೆ
ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಕರ್ನಾಟಕ ಮತ್ತು GCCಗಳ ಸಹಭಾಗಿತ್ವವು ವಿಶ್ವದ ಅತ್ಯಂತ ಚುರುಕು ನವೋದ್ಯಮ ಪರಿಸರ ನಿರ್ಮಾಣಕ್ಕೆ ಕಾರಣವಾಗಿದೆ. ಉದ್ಯಮಗಳು ವಿಶ್ವಮಟ್ಟದ ಪ್ರತಿಭೆಯನ್ನು ಪಡೆದು, ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟದಲ್ಲಿ ಬೆಳೆಯಲು ಅನುಕೂಲಕರ ವಾತಾವರಣವನ್ನು ಸರ್ಕಾರ ಒದಗಿಸುತ್ತಿದೆ” ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅಭಿಪ್ರಾಯ
ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಮಾತನಾಡಿ, “ಇಂದು GCCಗಳು ಕೇವಲ ಡೆಲಿವರಿ ಸೆಂಟರ್ಗಳಲ್ಲ. AI, ಎಂಜಿನಿಯರಿಂಗ್, ಸಂಶೋಧನೆ ಹಾಗೂ ಉತ್ಪನ್ನ ಅಭಿವೃದ್ಧಿಯ ಜಾಗತಿಕ ಕೇಂದ್ರಗಳಾಗಿ ಬೆಳೆಯುತ್ತಿವೆ. ಅವುಗಳಿಗೆ ಅಗತ್ಯವಾದ ಪ್ರತಿಭೆ, ನೀತಿ ಬೆಂಬಲ ಹಾಗೂ ನವೋದ್ಯಮ ಪರಿಸರವನ್ನು ಕರ್ನಾಟಕ ಒದಗಿಸುತ್ತಿದೆ” ಎಂದರು.
ರಾಜ್ಯದ ಮುಂದಿನ ಆದ್ಯತೆಗಳು
ಸಭೆಯಲ್ಲಿ ಈ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು:
• ಕೃತಕ ಬುದ್ಧಿಮತ್ತೆ (AI) ಮತ್ತು ಜನರೇಟಿವ್ AI ಅಭಿವೃದ್ಧಿ
• ಕೌಶಲ್ಯಾಭಿವೃದ್ಧಿ ಹಾಗೂ ಭವಿಷ್ಯದ ಉದ್ಯೋಗಿಗಳ ಸಿದ್ಧತೆ
• ಡಿಜಿಟಲ್ ಮತ್ತು ನಗರ ಮೂಲಸೌಕರ್ಯ
• ಉದ್ಯಮ ಸ್ನೇಹಿ ನೀತಿಗಳು ಮತ್ತು ಸುಲಭ ವ್ಯವಹಾರ ವಾತಾವರಣ
• ಸಂಶೋಧನೆ, ನವೋದ್ಯಮ ಹಾಗೂ ಕೈಗಾರಿಕೆ-ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವ
• ಬೆಂಗಳೂರಿನ ಹೊರಗೂ GCC ಹೂಡಿಕೆ ವಿಸ್ತರಣೆ
• ಸ್ಟಾರ್ಟ್ಅಪ್ ಮತ್ತು ಡೀಪ್ಟೆಕ್ ಪರಿಸರ ಬಲಪಡಿಸುವುದು
• ಜಾಗತಿಕ ಮಟ್ಟದ ಹೆಚ್ಚಿನ ಹೊಣೆಗಾರಿಕೆಗಳನ್ನು GCCಗಳಿಗೆ ನೀಡುವ ವ್ಯವಸ್ಥೆ
ಸಭೆಯ ಅಂತ್ಯದಲ್ಲಿ ಸರ್ಕಾರ ಮತ್ತು ಉದ್ಯಮ ವಲಯದ ಪ್ರತಿನಿಧಿಗಳು ಚರ್ಚೆಯಲ್ಲಿ ಬಂದ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಒಟ್ಟಾಗಿ ಕೆಲಸ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು. 2029ರೊಳಗೆ ಭಾರತದಲ್ಲೇ GCC ಕ್ಷೇತ್ರದ ಮುಂಚೂಣಿ ರಾಜ್ಯವಾಗಿ ಕರ್ನಾಟಕವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ.