ಬೆಂಗಳೂರು : ಬೆಂಗಳೂರಿನಲ್ಲಿ ಅಕ್ಟೋಬರ್ 17ರಂದು ನಡೆಯಲಿರುವ T20 ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿ ರಾತ್ರಿ ಮನೆಗೆ ಮರಳುವ ಕ್ರೀಡಾಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ಪಂದ್ಯ ಮುಗಿದ ಬಳಿಕ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ರಾತ್ರಿ ವೇಳೆ ನಮ್ಮ ಮೆಟ್ರೋ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ. ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಮುಕ್ತಾಯಗೊಳ್ಳುವ ಟರ್ಮಿನಲ್ ನಿಲ್ದಾಣಗಳ ಕೊನೆಯ ರೈಲುಗಳ ಸೇವೆಯನ್ನು ಮುಂದುವರೆಸಲಾಗಿದ್ದು, ಅಕ್ಟೋಬರ್ 18ರ ಭಾನುವಾರದ ಮುಂಜಾನೆವರೆಗೂ ಮೆಟ್ರೋ ಸಂಚರಿಸಲಿದೆ.
ವಿವಿಧ ಪ್ರಮುಖ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಹೊರಡುವ ಸಮಯವನ್ನು BMRCL ಪ್ರತ್ಯೇಕವಾಗಿ ಪ್ರಕಟಿಸಿದೆ. ಅದರಂತೆ, ವೈಟ್ಫೀಲ್ಡ್ (ಕಾಡುಗೋಡಿ) ಮತ್ತು ಬೊಮ್ಮಸಂದ್ರ ನಿಲ್ದಾಣಗಳಿಂದ ಮಧ್ಯರಾತ್ರಿ 12 ಗಂಟೆಗೆ, ಚಲ್ಲಘಟ್ಟ, ಮಾದಾವರ ಹಾಗೂ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ರಾತ್ರಿ 12.15ಕ್ಕೆ ಕೊನೆಯ ರೈಲು ಹೊರಡಲಿದೆ. ಇನ್ನು ಆರ್.ವಿ. ರಸ್ತೆಯಿಂದ ರಾತ್ರಿ 1.30ಕ್ಕೆ ಹಾಗೂ ಎಲ್ಲಾ ನಾಲ್ಕೂ ದಿಕ್ಕುಗಳ ಸಂಪರ್ಕ ಕಲ್ಪಿಸುವ ಮೆಜೆಸ್ಟಿಕ್ ನಿಲ್ದಾಣದಿಂದ ರಾತ್ರಿ 1 ಗಂಟೆಗೆ ಕೊನೆಯ ರೈಲು ಸಂಚರಿಸಲಿದೆ.
ಪಂದ್ಯದ ಮುಗಿಯುವ ಸಮಯ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಇಷ್ಟು ಸಮಯಾವಕಾಶ ವಿಸ್ತರಣೆಯಾಗಿರುವುದರಿಂದ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಆರಾಮವಾಗಿ ಮೆಟ್ರೋ ಮೂಲಕ ತಮ್ಮ ಗಮ್ಯಸ್ಥಾನ ತಲುಪಬಹುದು. ಆದರೂ, ಪ್ರಯಾಣಿಕರು ತಾವು ತಲುಪಬೇಕಾದ ಮಾರ್ಗ ಹಾಗೂ ಇಂಟರ್ಚೇಂಜ್ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ತಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿಕೊಳ್ಳುವುದು ಸೂಕ್ತ ಎಂದು ನಿಗಮ ತಿಳಿಸಿದೆ.