ತನ್ನ ಪತಿಯ ನಡವಳಿಕೆಯ ಮೇಲೆ ತೀವ್ರ ಸಂಶಯಗೊಂಡ ಪತ್ನಿಯೊಬ್ಬಳು ಆತನ ದ್ವಿಚಕ್ರ ವಾಹನಕ್ಕೆ ರಹಸ್ಯವಾಗಿ ಜಿಪಿಎಸ್ ಸಾಧನ ಅಳವಡಿಸಿ, ಆತ ಮತ್ತೊಬ್ಬ ಮಹಿಳೆಯೊಂದಿಗೆ ಹೋಟೆಲ್ ಒಂದರ ಬಳಿ ಇದ್ದಾಗ ರೆಡ್‌ಹ್ಯಾಂಡಾಗಿ ಹಿಡಿದಿರುವ ನಾಟಕೀಯ ಘಟನೆಯೊಂದು ಗುಜರಾತಿನ ಖಾನ್‌ಪುರದಲ್ಲಿ ನಡೆದಿದೆ. ಈ ವೇಳೆ ಸ್ಥಳದಲ್ಲಿ ತೀವ್ರ ಗದ್ದಲ ಉಂಟಾಗಿದ್ದು, ಪತಿಯು ಪತ್ನಿಯನ್ನೇ ನಡುರಸ್ತೆಗೆ ತಳ್ಳಿ ಮತ್ತೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಪತಿಯ ಅಂಗಡಿಯ ಕಣ್ಗಾವಲು ಕ್ಯಾಮೆರಾಗಳು ಮತ್ತು ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದನ್ನು ಪತ್ನಿ ಗಮನಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಮೊಬೈಲ್ ಆನ್ ಆದ ತಕ್ಷಣ ಆಕೆ ಜಿಪಿಎಸ್ ಲೊಕೇಶನ್ ಪರಿಶೀಲಿಸಿದಾಗ, ಆತ ಏರ್‌ಪೋರ್ಟ್ ರಸ್ತೆಯಲ್ಲಿರುವ ಹೋಟೆಲ್ ಒಂದರ ಬಳಿ ಇರುವುದು ಕಂಡುಬಂದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪತ್ನಿ, ಆತ ತನ್ನ ಬೈಕ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಇರುವುದನ್ನು ನೇರವಾಗಿ ಹಿಡಿದಿದ್ದಾರೆ.
ಪತ್ನಿ ಪ್ರಶ್ನಿಸಿದಾಗ, ಆತ ಯಾವುದೇ ಪಶ್ಚಾತ್ತಾಪವಿಲ್ಲದೆ ತಾನು ಶೀಘ್ರದಲ್ಲೇ ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದಲ್ಲದೆ, ಜತೆಯಲ್ಲಿದ್ದ ಮಹಿಳೆಯನ್ನು ತನ್ನ ಎರಡನೇ ಹೆಂಡತಿ ಎಂದು ಪರಿಚಯಿಸಿದ್ದಾನೆ. ಅಷ್ಟೇ ಅಲ್ಲದೆ ಪತ್ನಿಯನ್ನು ರಸ್ತೆಗೆ ತಳ್ಳಿ, ಸಂಚಾರ ದಟ್ಟಣೆಯನ್ನು ಬಳಸಿಕೊಂಡು ಆಕೆಯೊಂದಿಗೆ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾನೆ. ತಕ್ಷಣವೇ ಮಹಿಳೆ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ನಂತರ ಪಶ್ಚಿಮ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪತಿಯು ತನ್ನದೇ ಆಪ್ತ ಸ್ನೇಹಿತೆಯೊಂದಿಗೆ ಅನೈತಿಕ ಸಂಬಂಧಕ್ಕೆ ಪ್ರಸ್ತಾಪ ಇಟ್ಟಿದ್ದ ವಿಷಯ ತಿಳಿದ ನಂತರ ಪತ್ನಿಗೆ ಆತನ ಮೇಲೆ ಸಂಶಯ ಬಲಗೊಂಡಿತ್ತು. ಹೀಗಾಗಿ ಆಕೆ ಗುಟ್ಟಾಗಿ ಪತಿಯ ಬೈಕ್‌ಗೆ ಸ್ಥಳ ಗುರುತಿಸುವ ಜಿಪಿಎಸ್ ಸಾಧನವನ್ನು ಅಳವಡಿಸಿದ್ದರು. ಈ ಮೂಲಕ ಆತ ಹಲವು ಮಹಿಳೆಯರೊಂದಿಗೆ ಹೋಟೆಲ್‌ಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಗೆ 2012 ರಲ್ಲಿ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಪತಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಗಂಡನ ಅಕ್ರಮ ಸಂಬಂಧಗಳ ಬಗ್ಗೆ ಅತ್ತೆಗೆ ದೂರು ನೀಡಿದಾಗ, ಗಂಡ ಹತ್ತು ಕಡೆ ಹೊಡೆದರೂ ಪತ್ನಿ ಸಹಿಸಿಕೊಳ್ಳಬೇಕು ಎಂದು ಉಡಾಫೆಯಾಗಿ ಪ್ರತಿಕ್ರಿಯಿಸಿದ್ದರು ಎಂದು ಮಹಿಳೆ ದೂರಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.