ಬೆಂಗಳೂರು- ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA), 2026 ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ, ಈಗ ಸರ್ಕಾರದ ಮೊದಲ ಆದ್ಯತೆ ಕಾಯ್ದೆಯಡಿ ಅನ್ವಯವಾಗುವ ಕಾರ್ಯವಿಧಾನ, ಸಕ್ಷಮ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿವರಗಳನ್ನು ಸ್ಪಷ್ಟವಾಗಿ ಪ್ರಕಟಿಸುವುದು ಮತ್ತು ಅಸ್ತಿತ್ವದಲ್ಲಿರುವ ಅಪಾರ್ಟ್ಮೆಂಟ್ ಸಂಘಗಳು ಸರಳ ಹಾಗೂ ಕಾಲಮಿತಿಯ ಪ್ರಕ್ರಿಯೆಯ ಮೂಲಕ KAOMA ವ್ಯಾಪ್ತಿಗೆ ವರ್ಗಾವಣೆಯಾಗಲು ವ್ಯವಸ್ಥೆ ಕಲ್ಪಿಸುವುದು ಆಗಬೇಕು ಎಂದು ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೇಷನ್ (BAF) ಒತ್ತಾಯಿಸಿದೆ.
KAOMA ಜಾರಿಗೆ ನಿಯಮಾವಳಿ ರೂಪದ ಅವಶ್ಯಕತೆ
ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿಯಮಾವಳಿ ಮತ್ತು ಕಾರ್ಯೋಚಿತ ಮಾದರಿ ಉಪನಿಯಮಗಳನ್ನು (Model By-laws) ಶೀಘ್ರ ರೂಪಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಫೆಡರೇಷನ್ ಆಗ್ರಹಿಸಿದೆ.
ಅದೇ ರೀತಿ, ಸಕ್ಷಮ ಪ್ರಾಧಿಕಾರದಡಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಶೀಘ್ರ ನೇಮಿಸಿ, ಅವರ ಹುದ್ದೆ, ವ್ಯಾಪ್ತಿ ಮತ್ತು ಸಂಪರ್ಕ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು BAF ತಿಳಿಸಿದೆ. ಇದರಿಂದ ಅಪಾರ್ಟ್ಮೆಂಟ್ ಮಾಲೀಕರು ಮತ್ತು ಸಂಘಗಳಿಗೆ ನೋಂದಣಿ, ವರ್ಗಾವಣೆ, ದೂರು ಪರಿಹಾರ ಹಾಗೂ ಇತರ ಕಾನೂನುಬದ್ಧ ಪ್ರಕ್ರಿಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎಂಬ ಸ್ಪಷ್ಟತೆ ದೊರೆಯಲಿದೆ ಎಂದು ಹೇಳಿದೆ.
KAOMA ಜಾರಿಗೆ ಹೊಣೆಗಾರರಾಗಿರುವ ಅಧಿಕಾರಿಗಳಿಗೆ ಹೊಸ ಕಾಯ್ದೆಯ ಉದ್ದೇಶ, ವಿಧಿಗಳು ಮತ್ತು ಕಾರ್ಯವಿಧಾನದ ಕುರಿತು ಸಮಗ್ರ ತರಬೇತಿ ನೀಡಬೇಕು. ರಾಜ್ಯದಾದ್ಯಂತ ಕಾಯ್ದೆಯ ವ್ಯಾಖ್ಯಾನ ಮತ್ತು ಜಾರಿಗೆ ಏಕರೂಪತೆ ಕಾಪಾಡಲು ಇದು ಅಗತ್ಯ ಎಂದು ಫೆಡರೇಷನ್ ಅಭಿಪ್ರಾಯಪಟ್ಟಿದೆ.
ಅಪಾರ್ಟ್ಮೆಂಟ್ ಸಂಘಗಳ KAOMAಗೆ ವರ್ಗಾವಣೆ
ವಿವಿಧ ಕಾನೂನು ಚೌಕಟ್ಟುಗಳಡಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಪಾರ್ಟ್ಮೆಂಟ್ ಸಂಘಗಳಿಗೆ ಅನಗತ್ಯ ಆಡಳಿತಾತ್ಮಕ ಹೊರೆ ಅಥವಾ ವ್ಯತ್ಯಯವಿಲ್ಲದೆ KAOMAಗೆ ವರ್ಗಾವಣೆಯಾಗಲು ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು. ನೋಂದಣಿ, ಆಡಳಿತ, ಅನುಸರಣೆ ಮತ್ತು ಸಾಮಾನ್ಯ ಪ್ರದೇಶಗಳ ನಿರ್ವಹಣೆ ಕುರಿತು ಸ್ಪಷ್ಟತೆ ಇರಬೇಕು ಎಂದು BAF ತಿಳಿಸಿದೆ.
ಈ ಪ್ರಕ್ರಿಯೆಯಲ್ಲಿ ಜಾಗೃತಿ ಕಾರ್ಯಕ್ರಮಗಳು, ಪಾಲುದಾರರ ಓರಿಯಂಟೇಷನ್, ಅಧಿಕಾರಿಗಳ ತರಬೇತಿ ಮತ್ತು ಅನುಷ್ಠಾನ ಮಾರ್ಗದರ್ಶನ ನೀಡುವಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಹಕರಿಸಲು BAF ಸಿದ್ಧವಿದೆ ಎಂದು ತಿಳಿಸಿದೆ.
ಹೊಸ ಕಾನೂನು ಚೌಕಟ್ಟಿನ ಸ್ವೀಕಾರ
2018ರಲ್ಲಿ ಆರಂಭವಾದ ನಿರಂತರ ಮನವಿಗಳು, ಸಮಾಲೋಚನೆಗಳು ಮತ್ತು ಅಪಾರ್ಟ್ಮೆಂಟ್ ಸಮುದಾಯಗಳ ಸಂಘಟಿತ ಪ್ರಯತ್ನಗಳ ಫಲವಾಗಿ ಎಂಟು ವರ್ಷಗಳ, ಸುಮಾರು ದಶಕದ ಹೋರಾಟದ ಬಳಿಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆಗೆ ಪ್ರತ್ಯೇಕ ಕಾನೂನು ಚೌಕಟ್ಟು ರೂಪುಗೊಂಡಿದೆ ಎಂದು BAF ಹೇಳಿದೆ.
ಈ ಮಹತ್ವದ ಕಾನೂನಿಗೆ ಅನುಮೋದನೆ ನೀಡಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ BAF ಕೃತಜ್ಞತೆ ಸಲ್ಲಿಸಿದ್ದು, ಕಾಯ್ದೆಯನ್ನು ಮುಂದಕ್ಕೆ ಕೊಂಡೊಯ್ಯಲು ಬೆಂಬಲ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಧನ್ಯವಾದ ತಿಳಿಸಿದೆ.
ಅನುಷ್ಠಾನದಲ್ಲಿ ಸ್ಪಷ್ಟತೆ ಅಗತ್ಯ
“ಕಾಯ್ದೆ ಜಾರಿಗೆ ಬಂದಿದೆ; ಈಗ ಅದನ್ನು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಮುಖ್ಯ. ನೋಂದಣಿ ಪ್ರಕ್ರಿಯೆ ಶೀಘ್ರ ಆರಂಭವಾಗಬೇಕು. ಅಸ್ತಿತ್ವದಲ್ಲಿರುವ ಅಪಾರ್ಟ್ಮೆಂಟ್ ಸಂಘಗಳು ಯಾವುದೇ ಗೊಂದಲವಿಲ್ಲದೆ KAOMA ವ್ಯಾಪ್ತಿಗೆ ವರ್ಗಾವಣೆಯಾಗಲು ಸ್ಪಷ್ಟ ವ್ಯವಸ್ಥೆ ಇರಬೇಕು. ಸಕ್ಷಮ ಪ್ರಾಧಿಕಾರ ಮತ್ತು ಅದರ ಅಧಿಕಾರಿಗಳ ವಿವರಗಳನ್ನೂ ತಕ್ಷಣ ಪ್ರಕಟಿಸಬೇಕು,” ಎಂದು BAF ಅಧ್ಯಕ್ಷ ಸತೀಶ್ ಮಲ್ಯ ತಿಳಿಸಿದ್ದಾರೆ
“KAOMA ಕೇವಲ ಮತ್ತೊಂದು ಕಾಯ್ದೆಯಲ್ಲ. ಅಪಾರ್ಟ್ಮೆಂಟ್ ಮಾಲೀಕರನ್ನು ತಮ್ಮ ಸಮುದಾಯದ ಆಡಳಿತ, ನಿರ್ವಹಣೆ ಮತ್ತು ಭವಿಷ್ಯದ ನ್ಯಾಯಸಮ್ಮತ ಪಾಲುದಾರರಾಗಿ ಗುರುತಿಸುವ ಮಹತ್ವದ ಕಾನೂನು ಚೌಕಟ್ಟಾಗಿದೆ. ಮಾಲೀಕತ್ವದ ಹಕ್ಕು, ಸಾಮಾನ್ಯ ಪ್ರದೇಶಗಳು ಮತ್ತು ಸಮುದಾಯದ ಹಿತಾಸಕ್ತಿಗಳ ರಕ್ಷಣೆಗೆ ಇದು ಬಲವಾದ ನೆಲೆ ಒದಗಿಸುತ್ತದೆ,” ಎಂದು ಅವರು ಹೇಳಿದರು.
BAF ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಮಾತನಾಡಿ, “KAOMA ಯಶಸ್ಸು ಅದರ ಅನುಷ್ಠಾನದಲ್ಲಿ ಇದೆ. ನೋಂದಣಿ, ಅಸ್ತಿತ್ವದಲ್ಲಿರುವ ಸಂಘಗಳ ವರ್ಗಾವಣೆ, ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ನೇಮಕ ಮತ್ತು ಕಾರ್ಯವಿಧಾನದ ಸ್ಪಷ್ಟತೆ ಶೀಘ್ರ ಬರಬೇಕು. ಪ್ರಕ್ರಿಯೆ ಸರಳ, ಊಹಿಸಬಹುದಾದ ಮತ್ತು ಎಲ್ಲ ಸಂಘಗಳಿಗೂ ಸುಲಭವಾಗಿ ಅನುಸರಿಸಬಹುದಾದಂತಿರಬೇಕು,” ಎಂದರು.
ಸ್ವಾಯತ್ತತೆ ಮತ್ತು ಅಧಿಕಾರವರ್ಗದ ತರಬೇತಿ ಅಗತ್ಯ
BAF ಗವರ್ನಿಂಗ್ ಕೌನ್ಸಿಲ್ ಸದಸ್ಯೆ – ಪಾಲಿಸಿ, ಸುಜಾತಾ ಆರ್. ಮಾತನಾಡಿ, “ನಿಯಮಾವಳಿ ಮತ್ತು ಮಾದರಿ ಉಪನಿಯಮಗಳು ಕಾರ್ಯವಿಧಾನ, ಜವಾಬ್ದಾರಿ, ಅನುಸರಣೆ ಹಾಗೂ ವರ್ಗಾವಣೆಯ ಪ್ರಕ್ರಿಯೆಯನ್ನು ಸ್ಪಷ್ಟಪಡಿಸಬೇಕು. ಕಾಯ್ದೆ ಜಾರಿಗೆ ಹೊಣೆಗಾರ ಅಧಿಕಾರಿಗಳಿಗೆ ವ್ಯವಸ್ಥಿತ ತರಬೇತಿ ನೀಡಿದಾಗ ಮಾತ್ರ ರಾಜ್ಯದಾದ್ಯಂತ ಏಕರೂಪ ಅನುಷ್ಠಾನ ಸಾಧ್ಯ,” ಎಂದು ಹೇಳಿದರು.
BAF ಗವರ್ನಿಂಗ್ ಕೌನ್ಸಿಲ್ ಸದಸ್ಯ – ಕಮ್ಯುನಿಕೇಷನ್ಸ್, ವಿಶ್ವ ವೆಂಕಟ ರೆಡ್ಡಿ ಮಾತನಾಡಿ, “ಅಪಾರ್ಟ್ಮೆಂಟ್ ಮಾಲೀಕರು, ಸಂಘಗಳ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರಿಗೆ ಹೊಸ ಹಕ್ಕುಗಳು, ಜವಾಬ್ದಾರಿಗಳು ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆ ಸ್ಪಷ್ಟ ಅರಿವು ಅಗತ್ಯ. ಜಾಗೃತಿ, ತರಬೇತಿ ಮತ್ತು ಸುಗಮ ವರ್ಗಾವಣೆಗೆ ಸರ್ಕಾರದೊಂದಿಗೆ BAF ಕೈಜೋಡಿಸಲು ಸಿದ್ಧವಾಗಿದೆ,” ಎಂದರು.
ಈ ಕಾನೂನು ರೂಪುಗೊಳ್ಳಲು ನಿರಂತರವಾಗಿ ಶ್ರಮಿಸಿದ ಸರ್ಕಾರಿ ಅಧಿಕಾರಿಗಳು, ಶಾಸಕರು, ಪಾಲುದಾರರು, ಅಪಾರ್ಟ್ಮೆಂಟ್ ಮಾಲೀಕರು, ಸ್ವಯಂಸೇವಕ ನಿವಾಸಿಗಳು ಮತ್ತು ಸಮುದಾಯದ ಮುಖಂಡರ ಕೊಡುಗೆಯನ್ನು BAF ಇದೇ ಸಂಧರ್ಭದಲ್ಲಿ ಸ್ಮರಿಸಿ ಧನ್ಯವಾದ ತಿಳಿಸಿದೆ.
ನಿಯಮಾವಳಿ ಅಧಿಸೂಚನೆ, ನೋಂದಣಿ ಪ್ರಾರಂಭ, ಅಸ್ತಿತ್ವದಲ್ಲಿರುವ ಸಂಘಗಳ ವರ್ಗಾವಣೆ, ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ನೇಮಕ ಮತ್ತು ಅವರ ತರಬೇತಿಯನ್ನು ವಿಳಂಬವಿಲ್ಲದೆ ಕೈಗೊಳ್ಳುವುದೇ KAOMA 2026ರ ಪ್ರಯೋಜನಗಳನ್ನು ರಾಜ್ಯದ ಅಪಾರ್ಟ್ಮೆಂಟ್ ಸಮುದಾಯಗಳಿಗೆ ತಲುಪಿಸುವ ಮುಂದಿನ ಪ್ರಮುಖ ಹೆಜ್ಜೆ ಎಂದು ಫೆಡರೇಷನ್ ಹೇಳಿದೆ.