ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 4,382 ಪ್ರಯಾಣಿಕರಿಗೆ ನಿಗಮದ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಸೆಪ್ಟೆಂಬರ್-2026ರ ಮಾಹೆಯಲ್ಲಿ ನಡೆಸಲಾದ ಭರ್ಜರಿ ತಪಾಸಣೆ ವೇಳೆ ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ಬರೋಬ್ಬರಿ 8,45,034 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
42 ಸಾವಿರಕ್ಕೂ ಅಧಿಕ ಬಸ್‌ಗಳ ತಪಾಸಣೆ:
ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಪಾಸಣಾ ತಂಡಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ಒಟ್ಟು 42,784 ಬಸ್‌ಗಳನ್ನು ತನಿಖೆಗೊಳಪಡಿಸಲಾಗಿದೆ. ಈ ವೇಳೆ ಒಟ್ಟು 4,310 ಅಕ್ರಮ/ಲೋಪದೋಷ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
₹1.12 ಲಕ್ಷ ಆದಾಯ ಸೋರಿಕೆ ಪತ್ತೆ, ಸಿಬ್ಬಂದಿ ವಿರುದ್ಧ ಕ್ರಮ:
ತಪಾಸಣಾ ವೇಳೆ ನಿಗಮದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದ 1,12,019 ರೂಪಾಯಿಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕರ್ತವ್ಯದಲ್ಲಿ ಲೋಪವೆಸಗಿದ ಹಾಗೂ ಅಕ್ರಮದಲ್ಲಿ ಭಾಗಿಯಾದ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಇಲಾಖಾ ರೀತಿಯ ಸೂಕ್ತ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಪ್ರಯಾಣಿಕರಿಗೆ ನಿಗಮದ ಮನವಿ:
ಸಾರ್ವಜನಿಕ ಪ್ರಯಾಣಿಕರು ಬಸ್ಸುಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸೂಕ್ತವಾದ ಟಿಕೆಟ್ ಅಥವಾ ಮಾನ್ಯವಾದ ಪಾಸ್ ಪಡೆದೇ ಪ್ರಯಾಣಿಸಬೇಕು ಎಂದು ಕೆಎಸ್‌ಆರ್‌ಟಿಸಿ ಈ ಮೂಲಕ ಪ್ರಕಟಣೆಯಲ್ಲಿ ಮನವಿ ಮಾಡಿದೆ.