ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಪೆದ್ದಿ ಚಲನಚಿತ್ರದ ವಿಶೇಷ ಹಾಡೊಂದರ ಪ್ರೋಮೋ ಇದೀಗ ಹೊರಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಗ್ರಾಮೀಣ ಹಿನ್ನೆಲೆಯ ಕ್ರೀಡಾ ಆಧಾರಿತ ಸಿನಿಮಾದ ಪ್ರಕಟಣೆ ಆದಾಗಿನಿಂದಲೂ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡವು ಶ್ರುತಿ ಹಾಸನ್ ಕಾಣಿಸಿಕೊಂಡಿರುವ ಹೆಲ್ಲಲ್ಲಲ್ಲೋ ಎಂಬ ಮಾಸ್ ಹಾಡಿನ ಪ್ರೋಮೋವನ್ನು ಹಂಚಿಕೊಂಡಿದೆ.
ಈ ಸಣ್ಣ ಪ್ರೋಮೋ ವಿಡಿಯೋದಲ್ಲಿ ರಾಮ್ ಚರಣ್, ಶ್ರುತಿ ಹಾಸನ್ ಮತ್ತು ಜಾನ್ವಿ ಕಪೂರ್ ಅವರ ಅತ್ಯಂತ ಶಕ್ತಿಶಾಲಿ ಹಾಗೂ ಆಕರ್ಷಕ ನೃತ್ಯದ ಜಲಕ್ ಕಾಣಿಸಿಕೊಂಡಿದ್ದು, ಇದೊಂದು ಪಕ್ಕಾ ಕಮರ್ಷಿಯಲ್ ಹಾಡು ಎಂಬುದನ್ನು ಸಾಬೀತುಪಡಿಸಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಅವರ ವೇಗದ ಲಯದ ಸಂಗೀತ ಸಂಯೋಜನೆಗೆ ಅನಂತ ಶ್ರೀರಾಮ್ ಸಾಹಿತ್ಯ ಬರೆದಿದ್ದು, ರಕ್ಷಿತಾ ಸುರೇಶ್ ಧ್ವನಿಯಾಗಿದ್ದಾರೆ. ಈ ಪೂರ್ಣ ಪ್ರಮಾಣದ ಹಾಡನ್ನು ಭೋಪಾಲ್ ನಲ್ಲಿ ಆಯೋಜಿಸಲಾಗಿರುವ ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಕನ್ನಡದ ಹೆಮ್ಮೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ದಿವ್ಯೇಂದು ಶರ್ಮಾ, ಜಗಪತಿ ಬಾಬು ಹಾಗೂ ಬೊಮನ್ ಇರಾನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ವೃದ್ಧಿ ಸಿನಿಮಾಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಮನರಂಜನಾತ್ಮಕ ಸಿನಿಮಾವು ಮುಂದಿನ ತಿಂಗಳು ಅಂದರೆ ಜೂನ್ ನಾಲ್ಕರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.