ಬಾಲಿವುಡ್ ಚಿತ್ರರಂಗದಲ್ಲಿ ಫಿಟ್ನೆಸ್ ಎಂದ ತಕ್ಷಣ ನೆನಪಿಗೆ ಬರುವ ಮೊದಲ ಹೆಸರುಗಳಲ್ಲಿ ನಟಿ ಮಲೈಕಾ ಅರೋರಾ ಮುಂಚೂಣಿಯಲ್ಲಿರುತ್ತಾರೆ. ಪ್ರಸ್ತುತ 52 ವರ್ಷ ವಯಸ್ಸಾಗಿದ್ದರೂ ತಮ್ಮ ಕಠಿಣ ವರ್ಕೌಟ್ ಹಾಗೂ ಶಿಸ್ತುಬದ್ಧ ಜೀವನಶೈಲಿಯ ಮೂಲಕ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಿದ್ದಾರೆ. ಯೋಗ ಮತ್ತು ಜಿಮ್ ವರ್ಕೌಟ್‌ಗಳ ಮೂಲಕ ದೇಹವನ್ನು ದಂಡಿಸುವ ಮಲೈಕಾ, ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಹೊಸ ಜಿಮ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ಕಠಿಣ ವರ್ಕೌಟ್ ಸೆಷನ್ ಬಿಚ್ಚಿಟ್ಟ ನಟಿ
ಈ ವಾರ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ತರಬೇತುದಾರ ರಾಬಿನ್ ಬೆಹ್ಲ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಕಠಿಣ ತರಬೇತಿಯ ತುಣುಕುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಿಯಮಿತವಾಗಿ ಜಿಮ್‌ನಲ್ಲಿ ಕಷ್ಟಪಡುವುದೇ ತಮ್ಮ ಯೌವನದ ರಹಸ್ಯ ಎಂಬುದನ್ನು ಅವರು ಈ ವಿಡಿಯೋಗಳ ಮೂಲಕ ಸಾಬೀತುಪಡಿಸಿದ್ದಾರೆ. ಶಕ್ತಿ, ನಮ್ಯತೆ ಮತ್ತು ದೈಹಿಕ ಸಮತೋಲನವನ್ನು ಹೆಚ್ಚಿಸುವ ವಿವಿಧ ಕಠಿಣ ವ್ಯಾಯಾಮಗಳನ್ನು ಅವರು ಅತ್ಯಂತ ಸುಲಭವಾಗಿ ಮಾಡುತ್ತಿರುವುದು ಈ ವಿಡಿಯೋಗಳಲ್ಲಿ ಕಂಡುಬಂದಿದೆ.
ವೈರಲ್ ವಿಡಿಯೋದಲ್ಲೇನಿದೆ?
ಮಲೈಕಾ ಹಂಚಿಕೊಂಡಿರುವ ವಿಡಿಯೋ ಸರಣಿಯಲ್ಲಿ ಅವರ ವರ್ಕೌಟ್‌ನ ವಿವಿಧ ಹಂತಗಳನ್ನು ನೋಡಬಹುದು. ಮೊದಲನೆಯದಾಗಿ, ಅವರು ರೆಸಿಸ್ಟೆನ್ಸ್ ಬ್ಯಾಂಡ್ ಬಳಸಿ ಮಂಡಿಯೂರಿ ಕುಳಿತುಕೊಳ್ಳುವ ಭಂಗಿಯಲ್ಲಿ ಇಡೀ ದೇಹದ ಮೂವ್ಮೆಂಟ್ಸ್ ನಿಯಂತ್ರಿಸುವ ವ್ಯಾಯಾಮ ಮಾಡಿದ್ದಾರೆ. ಇದು ದೇಹದ ಕೋರ್ ಸ್ನಾಯುಗಳನ್ನು ಬಲಪಡಿಸಲು ಸಹಕಾರಿಯಾಗಿದೆ.
ಮತ್ತೊಂದು ದೃಶ್ಯದಲ್ಲಿ, ಪಾದಗಳ ಕೆಳಗೆ ಸ್ಲೈಡಿಂಗ್ ಡಿಸ್ಕ್‌ಗಳನ್ನು ಇಟ್ಟುಕೊಂಡು ಪ್ಲ್ಯಾಂಕ್ ಮತ್ತು ಮೌಂಟನ್ ಪೋಸ್ ಭಂಗಿಗಳನ್ನು ಅತ್ಯಂತ ಸಮತೋಲನದಿಂದ ಮಾಡುವ ಮೂಲಕ ತಮ್ಮ ಫ್ಲೆಕ್ಸಿಬಿಲಿಟಿ ಪ್ರದರ್ಶಿಸಿದ್ದಾರೆ. ಇದರೊಂದಿಗೆ ತೂಕ ಎತ್ತುವ ವೇಯ್ಟ್ ಟ್ರೈನಿಂಗ್ ಹಾಗೂ ಸಸ್ಪೆಂಡೆಡ್ ರಿಂಗ್ಸ್ ಬಳಸಿ ದೇಹವನ್ನು ತಿರುಗಿಸುವ ಅತ್ಯಂತ ಕಠಿಣವಾದ ಬ್ಯಾಲೆನ್ಸಿಂಗ್ ವ್ಯಾಯಾಮಗಳನ್ನು ಮಾಡುವ ಮೂಲಕ ತಮ್ಮ ವರ್ಕೌಟ್ ದಿನಚರಿಯನ್ನು ಪೂರ್ಣಗೊಳಿಸಿದ್ದಾರೆ.
ಐವತ್ತರ ಹರೆಯದಲ್ಲೂ ಮಲೈಕಾ ಅರೋರಾ ಅವರ ಈ ಕಠಿಣ ಪರಿಶ್ರಮ ಮತ್ತು ಫಿಟ್ನೆಸ್ ಬದ್ಧತೆಯನ್ನು ಕಂಡು ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಹುಬ್ಬೇರಿಸಿದ್ದು, ಕಮೆಂಟ್ ಬಾಕ್ಸ್‌ನಲ್ಲಿ ಪ್ರಶಂಸೆಗಳ ಸುರಿಮಳೆಗೈಯುತ್ತಿದ್ದಾರೆ.