ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎನ್.ಎಸ್. ಶಂಕರ್ ಹೃದಯಾಘಾತದಿಂದ ವಿಧಿವಶರಾಗಿರುವ ಘಟನೆ ನಡೆದಿದೆ.
ಪತ್ರಕರ್ತರೂ ಆಗಿದ್ದ ಶಂಕರ್ ಅವರು ಕನ್ನಡದ ಹೆಸರಾಂತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ‘ಉಲ್ಟಾ ಪಲ್ಟಾ’ ಎಂಬ ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಖ್ಯಾತಿ ಅವರದ್ದು. ಎನ್.ಎಸ್.ಶಂಕರ್ ಅವರ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಕಳೆದ ಕೆಲವು ದಿನಗಳಿಂದ ಎನ್.ಎಸ್. ಶಂಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಉತ್ತಮ ಬರಹಗಾರರಾಗಿದ್ದ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದರು. ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದ್ದರು.
‘ಪ್ರಜಾವಾಣಿ’, ‘ಮುಂಗಾರು’, ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದ ಎನ್.ಎಸ್. ಶಂಕರ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ‘ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ’ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಮೂಲದ ಎನ್.ಎಸ್ ಶಂಕರ್ ಅವರು ಬಾಲ್ಯವನ್ನು ಕಳೆದಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ. ಹೈಸ್ಕೂಲ್ ಓದಿದ್ದು ಮೈಸೂರಿನಲ್ಲಿ. ಬೆಂಅಗ್ಳೂರಿನಲ್ಲಿ ಕಾಲೇಜು ಶಿಕ್ಷಣವನ್ನುಪೂರೈಸಿದ್ದರು.